ರಾಣೇಬೆನ್ನೂರು: ಬಂಜಾರ ಸಮಾಜ ಮುಖಂಡ ರಾಮಪ್ಪ ನಾಯ್ಕ ಎಚ್ಚರಿಕೆ
ರಾಣಿಬೆನ್ನೂರು, ಡಿ.3- ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬಾರದು ಎಂದು ಬಂಜಾರ ಸಮಾಜದ ಮುಖಂಡ ರಾಮಪ್ಪ ನಾಯ್ಕ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರ ಸಮಾಜದ ಹಿತಕ್ಕೆ ಮಾರಕವಾಗಿರುವ ಸದಾಶಿವ ಆಯೋಗದ ವರದಿ ಕುರಿತು ರಾಜ್ಯ ಸರ್ಕಾರದ ಕೆ.ಎಚ್.ಮುನಿಯಪ್ಪ ಹಾಗೂ ಜಿ.ಪರಮೇಶ್ವರ ಬಹಿರಂಗ ಹೇಳಿಕೆ ನೀಡಿರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಅವರಿಬ್ಬರು ಒಂದು ಸಮಾಜದ ಪರ ಮಾತನಾಡಿರುವುದು ಸರಿಯಲ್ಲ. ಹಿಂದಿನ ಸರ್ಕಾರದ ವರದಿ ಜಾರಿಗೆ ತರಲು ಹೋಗಿ ಸಾಕಷ್ಟು ಬೆಲೆ ತೆತ್ತಿದೆ.
ಒಂದು ವೇಳೆ ವರದಿ ಜಾರಿ ಮಾಡಿದಲ್ಲಿ ನಮ್ಮ ಸಮಾಜದ ಜನರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವರು. ನಮ್ಮ ಸಮಾಜದ ಜನರು ಮೊದಲಿನಿಂದಲೂ ದುಡಿದು ತಿನ್ನುವ ಶ್ರಮಿಕ ವರ್ಗದವರಾಗಿದ್ದಾರೆ. ಸದಾಶಿವ ಆಯೋಗದ ವರದಿಯ ಶಿಫಾರಸ್ಸುಗಳನ್ನು ಗಮನಿಸಿದಾಗ ನಾಡಿನ ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ ಸಮುದಾಯಗಳ ಮೀಸಲಾತಿ ಹಕ್ಕನ್ನು ಅಭದ್ರಗೊಳಿಸುವ ಹುನ್ನಾರ ಅದರಲ್ಲಿ ಅಡಗಿದೆ. ರಾಜ್ಯಸಭೆಯಲ್ಲಿ ಮೀಸಲಾತಿ ಕುರಿತು ಸದಸ್ಯರ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಅವರು ಪ್ರಸ್ತುತ ನಮ್ಮ ಸಂವಿಧಾನದಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ವರ್ಗೀಕರಣ ಮಾಡಲು ಅವಕಾಶವಿಲ್ಲ. ಬಹುಸಂಖ್ಯಾತ ರಾಜ್ಯಗಳು ಈ ವರ್ಗೀಕರಣವನ್ನು ವಿರೋಧಿಸಿವೆ ಎಂದು ತಿಳಿಸಿದ್ದಾರೆ. ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್, ಡಾ. ಬಿ. ಆರ್ ಅಂಬೇಡ್ಕರ್, ಜವಾಹರಲಾಲ್ ನೆಹರು, ದೇವರಾಜ ಅರಸು ಅವರುಗಳ ದೂರದೃಷ್ಟಿಯ ಕಾರಣದಿಂದಾಗಿ ಪರಿಶಿಷ್ಟ ಜಾತಿಗಳ ಮೀಸಲಾತಿ ಪರಿಧಿಯಲ್ಲಿರುವ ಬಂಜಾರ, ಭೋವಿ, ಕೊರಚ, ಕೊರಮ ಮತ್ತಿತರ ಅಲೆಮಾರಿ ಜಾತಿಗಳ ಮೀಸಲಾತಿಯನ್ನು ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ಸದಾಶಿವ ಆಯೋಗದ ವರದಿ ಜಾರಿ ಮಾಡಬಾರದು ಎಂದರು.
ತಾಲ್ಲೂಕು ಬಂಜಾರ ಸಮಾಜದ ಅಧ್ಯಕ್ಷ ಮಾನಪ್ಪ ಲಮಾಣಿ, ಉಪಾಧ್ಯಕ್ಷ ತೇಜಪ್ಪ ಲಮಾಣಿ, ಕಾರ್ಯದರ್ಶಿ ಬೀರಪ್ಪ ಲಮಾಣಿ, ಸಹ ಕಾರ್ಯದರ್ಶಿ ಭೀಮಪ್ಪ ಲಮಾಣಿ, ಸೋಮಪ್ಪ ಲಮಾಣಿ, ಮಾಲತೇಶ ಲಮಾಣಿ, ಚಂದ್ರು ಲಮಾಣಿ, ಅಶೋಕ ಲಮಾಣಿ, ಆನಂದ ಲಮಾಣಿ, ಡಿಳ್ಳೆಪ್ಪ ಲಮಾಣಿ ಸುದ್ದಿಗೋಷ್ಠಿಯಲ್ಲಿದ್ದರು.