ದಾವಣಗೆರೆ, ನ. 30 – ದಾವಣಗೆರೆ ವಿಶ್ವ ವಿದ್ಯಾನಿಲಯ ಮತ್ತು ಚಿಗಟೇರಿ ಕುಟುಂಬದವರ ಪ್ರಾಯೋಜಕತ್ವದ ಜಯರತ್ನ ಕಲ್ಯಾಣ ಕೇಂದ್ರ ಟ್ರಸ್ಟ್ ವತಿಯಿಂದ ನಾಳೆ ಡಿಸೆಂಬರ್ 1ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ದಿ. ಜಯಣ್ಣ ಎಂ. ಚಿಗಟೇರಿ ಸ್ಮಾರಕ ದತ್ತಿ ಉಪನ್ಯಾಸ ಮತ್ತು ಮಾನ ವಿಕ ಅಧ್ಯಯನದ ಶ್ರೇಷ್ಠ ಸಂಶೋಧನೆಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ.
ಬಾಪೂಜಿ ಎಂಬಿಎ ಸಭಾಂಗಣದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಪ್ರೊ.ರವೀಂದ್ರ ರೇಷ್ಮೆ ದತ್ತಿ ಉಪನ್ಯಾಸ ನೀಡಲಿದ್ದಾರೆ. ಈ ಬಾರಿ ಸಂಶೋಧನೆಗೆ ದಾವಣಗೆರೆ ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ, ಪಿಎಚ್.ಡಿ. ಪದವಿ ಪಡೆದ ಡಾ.ಎಚ್.ಗೋಪಿ ಅವರಿಗೆ ‘ಜಯಣ್ಣ ಚಿಗಟೇರಿ ಅವಾರ್ಡ್ ಫಾರ್ ಹುಮ್ಯಾನಿಟೀಸ್ ಎಕ್ಸ್ಲೆನ್ಸ್’ ಪುರಸ್ಕಾರ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು, ಫಲಕ ಮತ್ತು ಪ್ರಶಸ್ತಿ ಪ್ರತ್ರವನ್ನು ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೌಡ್ಸ್ ರಾಜ್ಯ ಉಪಾಧ್ಯಕ್ಷ ಕೊಂಡಜ್ಜಿ ಬಿ.ಷಣ್ಮುಖಪ್ಪ, ವಿಧಾನ ಪರಿಷತ್ ಸದಸ್ಯ ನವೀನ್ ಕೊಟ್ಟಿಗೆ, ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಉಪಾಧ್ಯಕ್ಷ ಡಾ.ಅಥಣಿ ವೀರಣ್ಣ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವೆ ಬಿ.ಬಿ. ಸರೋಜ ಮತ್ತು ಜಯರತ್ನ ಕಲ್ಯಾಣ ಕೇಂದ್ರ ಟ್ರಸ್ಟ್ ಸಂಯೋಜಕ ಡಾ.ಚಿನ್ಮಯ ಪಿ.ಚಿಗಟೇರಿ ತಿಳಿಸಿದ್ದಾರೆ.