ಮಲೇಬೆನ್ನೂರು, ನ. 29- ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಶಾಸಕ ಬಿ.ಪಿ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಕಳಪೆ ಶವಾಗಾರ ಕಟ್ಟಡ, ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳು ಅನಾವರಣಗೊಂಡವು.
18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶವಾಗಾರ ಕಾಮಗಾರಿ ಕಳಪೆಯಾಗಿದ್ದು, ಆರ್ಸಿಸಿ ಛಾವಣಿ ಸೋರುತ್ತಿದೆ. ಇದಕ್ಕೆ ಯಾರು ಕಾರಣ ? ಎಂದು ಪುರಸಭೆ ಮಾಜಿ ಸದಸ್ಯ ಭಾನುವಳ್ಳಿ ಸುರೇಶ್ ಅವರು ಸಭೆಯ ಆರಂಭದಲ್ಲೇ ಗಮನಸೆಳೆದರು.
ಸಭೆಯಲ್ಲಿ ಹಾಜರಿದ್ದ ಪುರಸಭೆ ಎಂಜಿನಿಯರ್ ಅವರು ಕಟ್ಟಡ ಸೋರಿಕೆ ಪರಿಶೀಲಿಸಿ, ದುರಸ್ಥಿ ಮಾಡಿಸುವುದಾಗಿ ತಿಳಿಸಿದಾಗ, ಇಂಜಿನಿಯರುಗಳು ಸರಿಯಾಗಿ ಕೆಲಸ ಮಾಡಿಸಿಲ್ಲ. ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಿ ಎಂದು ಸಭೆಯಲ್ಲಿದ್ದವರು ಪಟ್ಟುಹಿಡಿದರು.
ಪುರಸಭೆ ಅಧಿಕಾರಿ ಸೂಕ್ತ ಉತ್ತರ ನೀಡಲು ತಡಬಡಿಸಿದಾಗ ಬಲವಂತವಾಗಿ ಹಿರಿಯ ಅಧಿಕಾರಿಗಳಿಂದ ಒತ್ತಡ ಹಾಕಿಸಿ ಕಟ್ಟಡ ಮುಕ್ತಾಯದ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ ಘಟನೆಯೂ ನಡೆಯಿತು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ವೈದ್ಯರ ಮತ್ತು ಸರ್ಜನ್ ವೈದ್ಯರ ಕೊರತೆ ಇದೆ. ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ರಾತ್ರಿ ವೇಳೆ ವೈದ್ಯರು ಇರುವುದಿಲ್ಲ ಎಂದು ಜಿಗಳಿ ಹನುಮಗೌಡ ಸೇರಿದಂತೆ ಅನೇಕರು ದೂರಿದರು. ಲ್ಯಾಬೊರೇಟರಿ ವ್ಯವಸ್ಥೆ ಇಲ್ಲ ಎಂದು ಕಡಾರನಾಯ್ಕನಹಳ್ಳಿ ತಿಪ್ಪೇಸ್ವಾಮಿ ಹೇಳಿದರು.
ಸಿಬ್ಬಂದಿ ಕೊರತೆ ಕುರಿತು ಕರ್ತವ್ಯ ವೈದ್ಯಾಧಿಕಾರಿ ಡಾ. ಲಕ್ಷ್ಮಿ ದೇವಿ ಅವರು ಸಭೆಗೆ ಮಾಹಿತಿ ನೀಡಿದರು.
ನಾನು ಈ ಹಿಂದೆ ಆಸ್ಪತ್ರೆಗೆ ಬಂದಾಗ ದಂತ ವೈದ್ಯ ಡಾ. ನಿಸ್ಸಾರ್ ಅಹಮದ್ ಇರಲಿಲ್ಲ ಎಂದು ಸ್ವತಃ ಶಾಸಕ ಹರೀಶ್ ಅವರೇ ವೈದ್ಯರ ಗಮನ ಸೆಳೆದರು.
ದಂತ ವೈದ್ಯ ಡಾ. ನಿಸ್ಸಾರ್ ಅವರನ್ನು ಮಸೀದಿ ಕೆಲಸಕ್ಕೆ ನಿಯೋಜಿಸಿರುವುದಕ್ಕೆ ಎಂ.ಬಿ.ಶೌಕತ್ ಅಲಿ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಇಲ್ಲಿ ಕೊರೆತೆ ಇರುವ ವೈದ್ಯರು ಹಾಗೂ ಸಿಬ್ಬಂದಿ ನೇಮಕ ಮಾಡುವ ಬಗ್ಗೆ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ ಎಂದರು. ಕಳೆದ ಶಾಸಕರ ಅವಧಿಯಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದೀರಿ, ದಾಖಲೆ ನೀಡಿ ಎಂದು ಹರೀಶ್ ಅವರು ಸಭಾ ನಡಾವಳಿ ಪುಸ್ತಕ ಪರಿಶೀಲನೆ ನಡೆಸಿದರು.
ಸಭೆಯ ನಡಾವಳಿಯನ್ನು ಸರಿಯಾಗಿ ದಾಖಲಾತಿ ಇಟ್ಟಿಲ್ಲ. 6 ತಿಂಗಳಿಂದ ದಾಖಲೆ ಸರಿಯಾಗಿ ನಿರ್ವಹಿಸಿಲ್ಲ ಎಂದು ಆಸ್ಪತ್ರೆ ಹಾಗೂ ಕಚೇರಿ ಸಿಬ್ಬಂದಿಗೂ ಬಿಸಿಮುಟ್ಟಿಸಿ ದರು. ಎಲ್ಲಾ ಸಮರ್ಪಕ ದಾಖಲೆ ಇಟ್ಟು ಕೊಂಡು ಇನ್ನೊಮ್ಮೆ ಸಭೆ ಕರೆಯುವಂತೆ ಸೂಚಿಸಿ ಶಾಸಕ ಹರೀಶ್ ಅವರು ಸಭೆಯನ್ನು ಮುಕ್ತಾಯ ಮಾಡಿದರು.
ಉಪತಹಶೀಲ್ದಾರ್ ಆರ್.ರವಿ, ಪ್ರಭಾರಿ ಟಿಎಚ್ಒ ಡಾ. ಪ್ರಶಾಂತ್, ತಾ.ಪಂ ಕಚೇರಿಯ ಲಿಂಗರಾಜ್, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬಿ.ಮಂಜುನಾಥ್, ಬೆಣ್ಣೆಹಳ್ಳಿ ಸಿದ್ದೇಶ್, ಪಿ.ಆರ್.ರಾಜು, ಎ.ಕೆ.ಲೋಕೇಶ್, ಭೋವಿ ಮಂಜಣ್ಣ, ಆಶಿಕ್ ಅಲಿ, ಮೊಹಮದ್ ಫಾಜಿಲ್ ಮತ್ತಿತರರು ಸಭೆಯಲ್ಲಿದ್ದರು.