ಹರಿಹರ, ನ.28- ನಗರದ ಹಳೇ ಪಿ.ಬಿ. ರಸ್ತೆಯ ಮೂಲಕ ದಾವಣಗೆರೆಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಆಟೋದವರು ಅಡ್ಡಲಾಗಿ ನಿಂತು ದಾವಣಗೆರೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಎಸ್.ಆರ್.ಟಿ.ಸಿ. ಅಧಿಕಾರಿ ಮತ್ತು ಆಟೋ ಮಾಲೀಕರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಈ ವೇಳೆ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಮಲ್ಲೇಶ್ ಮಾತನಾಡಿ, ಹರಿಹರ ನಗರದಿಂದ ದಾವಣಗೆರೆ ನಗರಕ್ಕೆ ಪ್ರತಿನಿತ್ಯ ನೂರಾರು ಬಸ್ಗಳು ಸಂಚರಿಸುತ್ತವೆ. ಪ್ರಯಾಣಿಕರಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಬಸ್ ನಿಲ್ದಾಣದ ಹೊರಭಾಗದ ಹಳೆ ಪಿ.ಬಿ. ರಸ್ತೆ ಟೆಲಿಫೋನ್ ಕಚೇರಿಯ ಮುಂಭಾಗದಿಂದ ದಾವಣಗೆರೆ ಕಡೆಗೆ ಹೋಗಲು ಬಸ್ ನಿಲ್ಲಿಸಿ ಹತ್ತಿಸಲಾಗುತ್ತದೆ. ಆದರೆ, ದಾವಣಗೆರೆ ನಗರದಿಂದ ಬಂದಂತಹ ಕೆಲವು ಆಟೋ ಮಾಲೀಕರು ಬಸ್ ಪಕ್ಕದಲ್ಲಿ ಆಟೋ ನಿಲ್ಲಿಸಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಗೆ 200 ಮೀಟರ್ ದೂರದಲ್ಲಿ ಆಟೋ ನಿಲ್ಲಿಸಿ ಹತ್ತಿಸಿಕೊಂಡು ಹೋಗುವಂತೆ ಅನೇಕ ಬಾರಿ ನಾನು ಮತ್ತು ಪೊಲೀಸ್ ಇಲಾಖೆಯ ಟ್ರಾಫಿಕ್ ಸಿಬ್ಬಂದಿಗಳು ತಿಳಿಸಿದರೂ ಸಹ ತಮ್ಮ ಹಠವನ್ನು ಬಿಡದೇ ಇರುವುದರಿಂದ ಇಂದು ಆಟೋಗಳನ್ನು ಪೊಲೀಸ್ ಠಾಣೆಗೆ ಕಳಿಸಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ಮ್ಯಾನೇಜರ್ ಸಂದೀಪ್, ಪೊಲೀಸ್ ಸಿಬ್ಬಂದಿ ಎ.ಬಿ. ನಾಗರಾಜ್, ಶ್ರೀಕಾಂತ್, ಮಂಜುನಾಥ್ ಇತರರು ಹಾಜರಿದ್ದರು.