ಸಂಗೀತ, ಚಿತ್ರಕಲಾ, ರಂಗ ಕಲಾ ಶಿಕ್ಷಕರ ನೇಮಕಾತಿಗಾಗಿ ಪ್ರತಿಭಟನೆ

ಸಂಗೀತ, ಚಿತ್ರಕಲಾ, ರಂಗ ಕಲಾ ಶಿಕ್ಷಕರ ನೇಮಕಾತಿಗಾಗಿ ಪ್ರತಿಭಟನೆ

ದಾವಣಗೆರೆ,ನ.28-  ಸಂಗೀತ, ಚಿತ್ರಕಲಾ, ರಂಗ ಕಲಾ ಶಿಕ್ಷಕರ ನೇಮಕಾತಿಗಾಗಿ ಆಗ್ರಹಿಸಿ ಎಐಡಿವೈಓ ಸಂಘಟನೆಯಿಂದ ನಗರದ ಜಯದೇವ ವೃತ್ತದಲ್ಲಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 

ಖಾಲಿ ಇರುವ ಸಂಗೀತ, ಚಿತ್ರಕಲೆ, ರಂಗ ಕಲಾ ಶಿಕ್ಷಕರನ್ನು ಕೂಡಲೇ ಭರ್ತಿ ಮಾಡಬೇಕು.   ಅಲ್ಪಸಂಖ್ಯಾತ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಮಾತ್ರವಲ್ಲದೇ ಉಳಿದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಖಾಯಂ ಆಗಿ ಈ ಎಲ್ಲ ಸಹ ಪಠ್ಯ ವಿಷಯಗಳಿಗೆ ಶಿಕ್ಷಕರನ್ನು ಕೂಡಲೇ ನೇಮಿಸಬೇಕು.   ಕಡಿಮೆ ದಾಖಲಾತಿಯ ಕಾರಣಕ್ಕೆ ಈ ಹುದ್ದೆಗಳನ್ನು ರದ್ದುಪಡಿಸುವುದನ್ನು ನಿಲ್ಲಿಸಿ, ಎಲ್ಲಾ ಪ್ರೌಢ ಶಾಲೆಗಳಿಗೂ ಈ ವಿಷಯಗಳಿಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡುವಂತೆ ಹಕ್ಕೊತ್ತಾಯ ಮಾಡಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಸಂಘಟನೆಯ ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ರಾಜ್ಯದಲ್ಲಿ ಒಟ್ಟು 5240 ಸರ್ಕಾರಿ ಪ್ರೌಢ ಶಾಲೆಗಳಿವೆ. ಅವುಗಳಲ್ಲಿ ಕೆಲಸ ಮಾಡುತ್ತಿರುವ ಈ ಎಲ್ಲಾ ಸಹ ಪಠ್ಯ ವಿಷಯಗಳ ಒಟ್ಟು ಬೋಧಕರ ಸಂಖ್ಯೆ 1500 ನ್ನೂ ದಾಟುವುದಿಲ್ಲ. ಅದರಲ್ಲಿ ಅನೇಕರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಇನ್ನೂ ಕೆಲವರನ್ನು ಕಡಿಮೆ ದಾಖಲಾತಿಯ ಕಾರಣಕ್ಕೆ ಬೇರೆ ಶಾಲೆಗಳಿಗೆ ವರ್ಗಾಯಿಸಲಾಗುತ್ತಿದೆ ಎಂದರು.

 ಪ್ರತೀ ಮಗುವಿಗೂ ಈ ವಿಷಯಗಳಲ್ಲಿ ಅರಿವು, ತರಬೇತಿ ಬೇಕೆಂದ ಮೇಲೆ ಕಡಿಮೆ ದಾಖಲಾತಿಯ ಕಾರಣಕ್ಕೆ ಅಲ್ಲಿಂದ ಶಿಕ್ಷಕರನ್ನು ವರ್ಗಾಯಿಸುವ ಕ್ರಮವೇ ಅವೈಜ್ಞಾನಿಕವಾಗಿದೆ. 

2008-09ನೇ ಸಾಲಿನಲ್ಲಿ ಸುಮಾರು 600 ಶಿಕ್ಷಕರನ್ನು ನೇಮಕಾತಿ ಮಾಡಿದ್ದು ಬಿಟ್ಟರೆ ಇದುವರೆಗೆ ಈ ಶಿಕ್ಷಕರ ನೇಮಕಾತಿಗಳೇ ಆಗಿಲ್ಲ. ವಸತಿ ಶಾಲೆಗಳಿಗೆ 2022-23ರಲ್ಲಿ ಕ್ರೈಸ್ ಅಡಿಯಲ್ಲಿ ಸುಮಾರು 1200 ಶಿಕ್ಷಕರ ನೇಮಕವಾಗಿದೆ. ಆದರೆ ಇನ್ನೂ ಬಹುತೇಕ ಶಾಲೆಗಳಿಗೆ ಈ ಶಿಕ್ಷಕರ ನೇಮಕಾತಿ ಆಗಬೇಕಿದೆ.

ಮಕ್ಕಳಿಗೆ ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳು ಮಾತ್ರವಲ್ಲದೇ ಸಂಗೀತ, ಚಿತ್ರಕಲೆ, ರಂಗ ಕಲೆ ಇವೇ ಮೊದಲಾದ ಲಲಿತ ಕಲೆಗಳೂ ಅವಶ್ಯಕವಾಗಿವೆ.   ಆದ್ದರಿಂದ ಈ ಅಂಶವನ್ನು ಸರ್ಕಾರ ತುಂಬಾ ಗಂಭೀರವಾಗಿ ಪರಿಗಣಿಸಬೇಕು. 

ಕರ್ನಾಟಕದಲ್ಲಿ ನಿರುದ್ಯೋಗದ ಬೇಗೆಯಲ್ಲಿ ಬೇಯುತ್ತಿರುವ ಸಂಗೀತ, ಚಿತ್ರಕಲೆ, ಮತ್ತು ರಂಗ ಕಲೆಗಳಲ್ಲಿ ಪದವಿ ಪಡೆದವರ ನೇಮಕಾತಿಗಾಗಿ ಕೂಡಲೇ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾಕಾರರಾದ ಅನಿಲ್ ಕುಮಾರ್, ಗುರು, ರಾಘವೇಂದ್ರ ಹಾಗೂ ದೃಶ್ಯಕಲಾ ಕಾಲೇಜಿನ ಕಾವ್ಯ, ಆರ್ಶಿಯಾ, ಶಿಲ್ಪ, ಸುಶ್ಮಿತಾ, ಲೇಖಕ್, ಗುರುಪ್ರಸಾದ್, ಲಕ್ಷ್ಮಣ್, ಸಬ್ರೀನ್, ಅನುಷಾ, ಗೌತಮ್, ವಿಠಲ್, ನಾಗರಾಜ್ ಪಾಲ್ಗೊಂಡಿದ್ದರು. 

error: Content is protected !!