ನಾಳೆ ಶರಣರ ಕಲ್ಯಾಣ ಕ್ರಾಂತಿ ವಿಜಯೋತ್ಸವ

ದಾವಣಗೆರೆ, ನ.26-   ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿ ಶ್ರೀಮಹಾ ಶಿವಶರಣ ಹರಳಯ್ಯ ಗುರುಪೀಠದಿಂದ 12ನೇ ಶತಮಾನದ ಶರಣರ ಕಲ್ಯಾಣ ಕ್ರಾಂತಿ ವಿಜಯೋತ್ಸವ ಹಾಗೂ ಶ್ರೀ ಮಹಾಶಿವಶರಣ ಹರಳಯ್ಯ ಚಲನಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವನ್ನು ನಾಡಿದ್ದು ದಿನಾಂಕ 28ರ ಮಂಗಳವಾರ ಗುರುಪೀಠದಲ್ಲಿ ಆಯೋಜಿಸಲಾಗಿದೆ ಎಂದು ಐಮಂಗಲ ಗುರುಪೀಠದ ಬಸವ ಹರಳಯ್ಯ ಮಹಾಸ್ವಾಮೀಜಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಶ್ರೀ ಮಹಾ ಶಿವಶರಣ ಹರಳಯ್ಯ ಪ್ರಶಸ್ತಿ ಪ್ರದಾನ, ಅಂತರ್ಜಾತಿ ವಿವಾಹವಾದ ಆದರ್ಶ ದಂಪತಿಗಳಿಗೆ ಸನ್ಮಾನ, ಝೀ ವಾಹಿನಿಯಲ್ಲಿ ಪ್ರತಿಭೆ ಪ್ರದರ್ಶಿಸಿದ ಪುಟಾಣಿಗಳಿಂದ ಸಂಗೀತ ಕಾರ್ಯಕ್ರಮ ಹಾಗೂ ಸಾಣೇಹಳ್ಳಿ ಶಿವಸಂಚಾರ ಕಲಾತಂಡ ಮತ್ತು ಇತರೆ ಕಲಾ ತಂಡಗಳಿಂದ ಮೂರು ದಿನಗಳ ಕಾಲ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.

ಬೇಲಿಮಠದ ಶಿವರುದ್ರ ಸ್ವಾಮೀಜಿ, ಮುರುಘಾ ಮಠದ ಪ್ರಭಾರಿ ಪೀಠಾಧ್ಯಕ್ಷರಾದ ಶ್ರೀ ಬಸವಪ್ರಭು ಸ್ವಾಮೀಜಿ ಧ್ವಜಾರೋಹಣ ನೆರವೇರಿಸುವರು. ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಸ್ವಾಮೀಜಿ, ಮೈಸೂರು ಶಿವಯೋಗಿ ಉರಿಲಿಂಗಿಸಿದ್ದೇಶ್ವರ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು.

ಇಳಕಲ್ ಚಿತ್ತರಗಿ ಮಠದ ಗುರು ಮಹಾಂತ ಸ್ವಾಮೀಜಿ, ರವಿದಾಸ ಮಠದ ಸಂತ ಸುಖದೇವ್ ಮಹಾರಾಜರು, ಮಹಾಶಿವಶರಣ ಹರಳಯ್ಯ ಚಲನಚಿತ್ರದ ಟ್ರೈಲರ್ ಬಿಡುಗಡೆ ಗೊಳಿಸುವರು. ಹುಣಸೂರು ರಾವಂದೂರು ವಿರಕ್ತಮಠದ ಮೋಕ್ಷಪತಿ ಸ್ವಾಮೀಜಿ ಹಾಗೂ ಚನ್ನಗಿರಿ ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹರಳಯ್ಯ ಪ್ರಶಸ್ತಿ ಪ್ರದಾನ ಮಾಡುವರು. ಅಂತರ್ಜಾತಿ ವಿವಾಹವಾದ ಆದರ್ಶ ದಂಪತಿಗಳಿಗೆ ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಬೊಮ್ಮನಳ್ಳಿ ಗವಿಮಠದ ಮಲ್ಲಿಕಾರ್ಜುನ್ ಸ್ವಾಮೀಜಿ ಸನ್ಮಾನ ಮಾಡುವರು. ಬಿದರಹಳ್ಳಿ ಮರಳು ಶಂಕರ ಮಠದ ಸಿದ್ದಬಸವ ಕಬೀರ ಸ್ವಾಮೀಜಿ, ನೆಲಮಂಗಲ ವನಕಲ್ ಮಠದ ಡಾ. ಬಸವ ರಮಾನಂದ ಸ್ವಾಮೀಜಿ ಪ್ರತಿಭಾ ಪುರಸ್ಕಾರ ಪ್ರದಾನ ಮಾಡುವರು.

ಸಚಿವರಾದ ಕೆ.ಹೆಚ್. ಮುನಿಯಪ್ಪ, ಡಿ. ಸುಧಾಕರ್, ಡಾ. ಹೆಚ್.ಸಿ. ಮಹಾದೇವಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಶರಣುಪ್ರಕಾಶ್ ಪಾಟೀಲ್, ಆರ್.ಬಿ. ತಿಮ್ಮಾಪುರ, ದಿನೇಶ್ ಗುಂಡೂರಾವ್, ನಾಡೋಜ ಡಾ. ಗೋ.ರು. ಚನ್ನಬಸಪ್ಪ, ನಿವೃತ್ತ ನ್ಯಾಯವಾದಿ ಪ್ರೊ. ನಾಗಮೋಹನದಾಸ್, ಸಂಪಾದಕ ರವೀಂದ್ರ ಭಟ್ಟ, ಸಾಹಿತಿ ಬಂಜಗೆರೆ ಜಯಪ್ರಕಾಶ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಐಮಂಗಲ ಮಠದ ಭಕ್ತರು ಹಾಗೂ ಪ್ರಮುಖರಾದ ರಾಮಚಂದ್ರಪ್ಪ, ಕರಿಬಸಪ್ಪ, ನಾಗರಾಜ್, ಲಿಂಗರಾಜ್, ಆನಂದ್ ಎಸ್. ಜಯಪ್ಪ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!