ಆಂಗ್ಲ ಭಾಷೆ ಶ್ರೇಷ್ಠ ಭಾಷೆ ಎಂಬ ಭಾವನೆಗಳು ಕನ್ನಡಿಗರಿಗೆ ಬೇಡ

ಆಂಗ್ಲ ಭಾಷೆ ಶ್ರೇಷ್ಠ ಭಾಷೆ ಎಂಬ ಭಾವನೆಗಳು ಕನ್ನಡಿಗರಿಗೆ ಬೇಡ

ಹರಿಹರ : ಕಾರ್ಮಿಕ ಮುಖಂಡ ಕೊಟ್ರಪ್ಪ

ಹರಿಹರ, ನ.23- ಆಂಗ್ಲ ಭಾಷೆ ಶ್ರೇಷ್ಠ ಭಾಷೆ ಎಂಬ ಭಾವನೆಗಳು ಕನ್ನಡಿಗರಿಗೆ ಬೇಡ. ಕನ್ನಡ ಭಾಷೆಗೆ ಇರುವ ಸಾಹಿತ್ಯದ ಸಂಪತ್ತು, ಜ್ಞಾನ ಭಂಡಾರ ಅನ್ಯ ಭಾಷೆಗಳಲ್ಲಿ ಕಾಣುವುದು ದುರ್ಲಬವೆಂದು ಕಾರ್ಮಿಕ ಮುಖಂಡ ಹೆಚ್.ಕೆ.ಕೊಟ್ರಪ್ಪ ಅಭಿಪ್ರಾಯಪಟ್ಟರು.

ನಗರದ ಹೈಸ್ಕೂಲ್ ಬಡಾವಣೆಯ ನೀರಿನ ಟ್ಯಾಂಕಿ ಬಳಿ ಇರುವ ಶ್ರೀ ರಾಮಾಂಜನೇಯ ಆಟೋ ಸ್ಟ್ಯಾಂಡಿನ ಆಟೋ ಮಾಲೀಕರು, ಚಾಲಕರು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭ್ಯವಾಗಿವೆ. ಜಗತ್ತಿನಲ್ಲಿ ಕನ್ನಡ ಭಾಷೆ 29ನೇ ಸ್ಥಾನದಲ್ಲಿದೆ. ಕನ್ನಡ ಭಾಷೆಯು ಅಭಿಜಾತ ಭಾಷೆ ಎಂಬ ಸ್ಥಾನಮಾನವನ್ನು ಕೇಂದ್ರ ಸರ್ಕಾರದಿಂದ ಪಡೆದಿದೆ. ಕನ್ನಡ ಭಾಷೆಗೆ ಸಾವಿರ ವರ್ಷಗಳ ಇತಿಹಾಸ ಇರುವ ಭಾಷೆಯಾಗಿದ್ದು, ವಿನೋಬಾಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿ ಎಂದು ಹೊಗಳಿದ್ದಾರೆ‌. ನುಡಿದಂತೆ ಬರೆಯುವ, ಬರೆದಂತೆ ನುಡಿಯುವ ಏಕೈಕ ಭಾಷೆ ಎಂದರೆ ಅದು ಕನ್ನಡ ಭಾಷೆ ಎಂದು ಹೇಳುತ್ತಾ, ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ನಾಮಕರಣವಾಗಿ 50ನೇ ವರ್ಷದ ಸಂಭ್ರಮದಲ್ಲಿ ಇರುವ ನಮಗೆ, ಕನ್ನಡ ನಿತ್ಯೋತ್ಸವವಾಗಲಿ ಎಂದು ಹಾರೈಸಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ದಿವಾಕರ್ ಶಿಂಪಿ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಸಿಗಬೇಕು. ಮಕ್ಕಳನ್ನು ಆಂಗ್ಲ ಶಾಲೆಗೆ ಸೇರಿಸುವ ಬದಲು, ಕನ್ನಡ ಮಾಧ್ಯಮ ಶಾಲೆಗೆ ಸೇರಿಸುವುದರ ಮೂಲಕ ಕನ್ನಡವನ್ನು ಬೆಳೆಸುವುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಶಿಕ್ಷಕ ಎ.ರಿಯಾಜ್ ಅಹಮದ್ ಮಾತನಾಡಿ, ಕನ್ನಡ ಕಬ್ಬಿಣದ ಕಡಲೆಯಲ್ಲ. ಅದು ಹಣ್ಣಿನಂತೆ ಇರುವ, ಸುಂದರ – ಸರಳ ಭಾಷೆ. ಕನ್ನಡ ಭಾಷೆಗೆ ಕುವೆಂಪು, ಬೇಂದ್ರೆ ಇನ್ನು ಸಾಕಷ್ಟು ಮಹನೀಯರು ಕನ್ನಡ ಭಾಷೆಗೆ ಮೆರುಗು ತಂದು ಕೊಟ್ಟಿದ್ದಾರೆ. ಇಂತವರನ್ನೆಲ್ಲಾ ನೆನಪಿನ ಲ್ಲಿಟ್ಟುಕೊಂಡು, ಕನ್ನಡ ಉಳಿಸಿ ಬೆಳೆಸುವ ಕೆಲಸ ಎಲ್ಲರೂ ಸೇರಿ ಮಾಡೋಣವೆಂದರು.

ಈ ಸಂದರ್ಭದಲ್ಲಿ ನಫೀಜ್ ಅಹಮದ್, ಪಿ.ನಾಗರಾಜ್, ಎ.ಎಸ್.ಮುರುಘ ರಾಜೇಂದ್ರ, ಎಲ್.ಎಂ.ಜೋಶಿ, ಶ್ರೀನಿವಾಸ್ ಜೋಶಿ, ಎಸ್.ಶೇಖರಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ಜಿ.ಮಂಜುನಾಥ್, ಪದಾಧಿಕಾರಿಗಳಾದ ಶ್ವೇತಾ ನಾಗರಾಜ್, ಆರ್.ಸೋಮನಾಥ್, ರವೀಂದ್ರ ಬಂಗಿ ಗೌಡ್ರು, ಚಂದ್ರಪ್ಪ, ಮಂಜು ಕಡಲ, ಮಂಜು ಸರ್ದಾರ್, ಮಂಜು ಅಂಬಾರಿ, ರಘು, ಗಣೇಶ, ನಾಗಪ್ಪ, ಶಫಿ, ಗೌಸ್, ಮುಬಾರಕ್, ಚಂದ್ರಪ್ಪ ಸಾಗರ್, ಹೇಮಂತ್ ಜುಟ್ಲ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!