ದಾವಣಗೆರೆ, ನ.22- ಬಿಳಿಚೋಡು – ಜಗಳೂರು ಮಾರ್ಗ ಮಧ್ಯದ ದೇವಿಕೆರೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿಕುಮಾರ್ ಟಿ.ಜಿ ಅವರು ಸೂಕ್ತ ಸಮಯದಲ್ಲಿ ಸ್ಪಂದಿಸಿ, ವೈದ್ಯ ವೃತ್ತಿಯ ಮಹತ್ವವನ್ನು ಎತ್ತಿಹಿಡಿದಿದ್ದಾರೆ.
ಏನಿದು ಘಟನೆ: ಮೊನ್ನೆ ಜಗಳೂರಿನ ಕಲ್ಲಯ್ಯ ಆಸ್ಪತ್ರೆಯಲ್ಲಿ ರೋಗಿಗಳನ್ನು ಉಪಚರಿಸಿ ಅವರು ತಮ್ಮ ಕಾರಿನಲ್ಲಿ ವಾಪಸ್ಸಾಗುತ್ತಿದ್ದರು. ಈ ವೇಳೆ, ದೇವಿಕೆರೆ ಕ್ರಾಸ್ ಬಳಿ ಬರುವಾಗ ಬೈಕ್ ಸವಾರನೊಬ್ಬ ಆಯತಪ್ಪಿ ಬಿದ್ದು ರಸ್ತೆ ಬದಿಯಲ್ಲಿ ನರಳುತ್ತಿದ್ದದ್ದು ಕಂಡು ಬಂದಿದೆ. ಕೂಡಲೇ ತಮ್ಮ ಕಾರು ನಿಲ್ಲಿಸಿದ ಡಾ.ರವಿಕುಮಾರ್, ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ವ್ಯಕ್ತಿಯ ಬಿಪಿ, ಪಲ್ಸ್, ಎದೆಬಡಿತ ಎಲ್ಲವನ್ನೂ ಪರೀಕ್ಷಿಸಿ, ಹೆಚ್ಚಿನ ಅಪಾಯವಾಗದಂತೆ ಚಿಕಿತ್ಸೆ ನೀಡಿದ್ದು, ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಡಾ. ರವಿಕುಮಾರ್ ಅವರ ಕರ್ತವ್ಯ ಪ್ರಜ್ಞೆ ಮತ್ತು ಸಮಯ ಪ್ರಜ್ಞೆಗೆ ಸಾಮಾಜಿಕ ಜಾಲತಾಣಗಳೂ ಸೇರಿದಂತೆ, ಹಲವೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಹಿಂದೊಮ್ಮೆ ಹೀಗಾಗಿತ್ತು: ದಾವಣಗೆರೆ ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ಡಾ. ರವಿಕುಮಾರ್ ಅವರು ತಮ್ಮ ಕಾರಿನಲ್ಲಿ ಬರುವಾಗ, ರಸ್ತೆ ಬದಿಯಲ್ಲಿ ನಿಂತಿದ್ದ ವಿದ್ಯಾರ್ಥಿನಿಯೊಬ್ಬರು ಬಿಸಿಲಿನ ಬೇಗೆಯಿಂದ ತಲೆಸುತ್ತು ಬಂದು ಅಸ್ವಸ್ಥರಾಗಿ ಬಿದ್ದಿದ್ದರು. ಇದನ್ನು ಕಾರಿನಿಂದಲೇ ಗಮನಿಸಿದ ಡಾ. ರವಿ, ಕೂಡಲೇ ವಿದ್ಯಾರ್ಥಿನಿಯ ಬಳಿಗೆ ತೆರಳಿ, ಆಕೆಗೆ ಪ್ರಥಮ ಚಿಕಿತ್ಸೆ ನೀಡಿದ್ದರು. ಸುಡು ಬಿಸಿಲಿನಲ್ಲಿ ವಿದ್ಯಾರ್ಥಿನಿ ಬಿದ್ದಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಭಯ ಮೂಡಿತ್ತು. ಆದರೆ, ಡಾ. ರವಿ ಅವರ ತ್ವರಿತ ವೈದ್ಯಕೀಯ ಉಪಚಾರದಿಂದ ವಿದ್ಯಾರ್ಥಿನಿಯು ಹತ್ತು ನಿಮಿಷಗಳಲ್ಲಿ ಚೇತರಿಸಿಕೊಂಡಿದ್ದರು.