ವಿದ್ಯಾರ್ಥಿ ವೇತನ ಮಂಜೂರಾತಿಗೆ ಆಗ್ರಹಿಸಿ ಎಐಡಿಎಸ್ಓ ಪ್ರತಿಭಟನೆ

ವಿದ್ಯಾರ್ಥಿ ವೇತನ ಮಂಜೂರಾತಿಗೆ ಆಗ್ರಹಿಸಿ ಎಐಡಿಎಸ್ಓ ಪ್ರತಿಭಟನೆ

ದಾವಣಗೆರೆ, ನ. 21- ವಿದ್ಯಾರ್ಥಿ ವೇತನವನ್ನು ಖಾತ್ರಿ ಪಡಿಸಲು ಆಗ್ರಹಿಸಿ, ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾಧ್ಯಕ್ಷ ಸುಭಾಷ್ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸೇರಿದಂತೆ ಹಲವು ವಿಭಾಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವು ಮಂಜೂರಾಗಿಲ್ಲ ಎಂದು ಕಿಡಿಕಾರಿದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಅರ್ಜಿ ಹಾಕಿದ್ದ ವಿದ್ಯಾರ್ಥಿ ವೇತನಗಳು ಇಲ್ಲಿಯವರೆಗೂ ಕೂಡ ದೊರೆತಿಲ್ಲ. ಇನ್ನು ಕೆಲವು ದಿನಗಳ ಹಿಂದಷ್ಟೇ ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶಿಷ್ಯವೇತನವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಪ್ರತಿ ವಿದ್ಯಾರ್ಥಿಗೆ ವಾರ್ಷಿಕ 5,000ದಿಂದ 60,000ದವರೆಗೆ ವಿತರಿಸಲ್ಪಡುತ್ತಿದ್ದ ವಿದ್ಯಾರ್ಥಿ ವೇತನದ ಮೊತ್ತವನ್ನು 1100 ರಿಂದ 11,000ಕ್ಕೆ ಇಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಎಲ್ಲಾ ಹಂತದ ಶಿಕ್ಷಣವು ವ್ಯಾಪಾರೀಕರಣಗೊಂಡು ಶುಲ್ಕಗಳು ಗಗನಕ್ಕೇರಿವೆ. ಬಡ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವುದು ಅತ್ಯಂತ ದುಸ್ತರವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರದ ಶಿಷ್ಯವೇತನವು ಸಾಕಷ್ಟು ಸಹಕಾರಿಯಾಗಿದೆ ಎಂದರು.

ಈ ಶಿಷ್ಯವೇತನದಿಂದಾಗಿ ಬಡ ವಿದ್ಯಾರ್ಥಿಗಳು ಪಿಯುಸಿ, ಪದವಿ ಸೇರಿದಂತೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ನಂತಹ ಉನ್ನತ ವ್ಯಾಸಂಗವನ್ನು ಕೂಡ ಪಡೆಯಬಹುದಾಗಿದೆ. ಆದರೆ ಈಗ ಭಾರೀ ಪ್ರಮಾಣದಲ್ಲಿ ಶಿಷ್ಯವೇತನದ ಮೊತ್ತವನ್ನು ಕಡಿತ ಗೊಳಿಸಿರುವುದು ಹಾಗೂ ವಿತರಣೆಯಲ್ಲಿ ದೀರ್ಘ ವಿಳಂಬವಾಗಿರುವುದು ಕಾರ್ಮಿಕರ ಹಾಗೂ ಬಡಮಕ್ಕಳ ಶಿಕ್ಷಣದ ಕನಸುಗಳನ್ನು ಚಿವುಟಿ ಹಾಕಿ ದಂತಾಗಿದೆ ಎಂದು ಆತಂಕವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ, ವಿದ್ಯಾರ್ಥಿ ಕಾರ್ಯಕರ್ತರಾದ ನಂದೀಶ್, ವಿದ್ಯಾರ್ಥಿಗಳಾದ ಚೇತನ್, ರೂಪ ಸೇರಿದಂತೆ, ಮುಂತಾದವರು ಉಪಸ್ಥಿತರಿದ್ದರು. 

error: Content is protected !!