ದಾವಣಗೆರೆ, ನ. 21- ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ನಿಮಿತ್ತ ಪೊಲೀಸ್ ಹಾಗೂ ಮಾಧ್ಯಮ ತಂಡಗಳ ಮಧ್ಯೆ ಇಂದು ನಡೆದ ಅಫಿಷಿಯಲ್ ಕಪ್ ಸೌಹಾರ್ದ ಪಂದ್ಯದಲ್ಲಿ ಮಾಧ್ಯಮ ತಂಡ ಜಯಭೇರಿ ಭಾರಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಮಾಧ್ಯಮ ತಂಡವು ನಿಗದಿತ 6 ಓವರ್‌ಗಳಲ್ಲಿ ಪೊಲೀಸ್ ತಂಡವನ್ನು ಕಡಿಮೆ ಮೊತ್ತದ ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಮಹಾದೇವ್, ರಮೇಶ್, ಡಾ.ವರದರಾಜ್, ರಾಮು ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪೊಲೀಸ್ ತಂಡವು 6 ವಿಕೆಟ್ ನಷ್ಟಕ್ಕೆ 43 ರನ್ ಕಲೆ ಹಾಕುವಲ್ಲಿ ಮಾತ್ರ ಶಕ್ತವಾಯಿತು. ಬಸವರಾಜ ನವಣಿ, ಮಂಜು ಮತ್ತಿತರರ ಕ್ಷೇತ್ರ ರಕ್ಷಣೆ ಮಾಧ್ಯಮ ತಂಡಕ್ಕೆ ಬಲ ನೀಡಿತು. ನಂತರ ಫೀಲ್ಡಿಗಿಳಿದ ಮಾಧ್ಯಮ ತಂಡವು ಮಹಾದೇವ್, ಮಧು ನಾಗರಾಜ್, ನೂರುಲ್ಲಾ ಮತ್ತಿತರರ ಅದ್ಭುತ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಒಂದು ಓವರ್ ಬಾಕಿ ಇರುವಂತೆಯೇ 2 ವಿಕೆಟ್ ನಷ್ಟದೊಂದಿಗೆ ನಿಗದಿತ ಗುರಿ ತಲುಪಿ ಗೆಲುವು ಸಾಧಿಸಿತು.
ಮಾಧ್ಯಮ ತಂಡದ ಇತರೆ ಸದಸ್ಯರಾದ ಪುನೀತ್, ಪರಶುರಾಮ, ಧನಂಜಯ, ಕಿರಣ, ವಿಷ್ಣು, ಮಹೇಶ, ಸಂಜಯ್, ನಿಂಗಪ್ಪ, ಪ್ರಕಾಶ್, ಸುರೇಶ್ ತಂಡದ ಗೆಲುವಿಗೆ ಸಹಕರಿಸಿದರು. ಅನೇಕ ವರ್ಷಗಳ ನಂತರ ಮಾಧ್ಯಮ ತಂಡವು ಪೊಲೀಸ್ ತಂಡದ ವಿರುದ್ಧ ಗೆಲುವು ಸಾಧಿಸಿದ್ದು ವಿಶೇಷವಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಸಂತೋಷ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ ಸೇರಿದಂತೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು, ಮಾಧ್ಯಮ ಮಿತ್ರರು ಸ್ಥಳದಲ್ಲಿ ಹಾಜರಿದ್ದು ವಿಜೇತ ತಂಡವನ್ನು ಅಭಿನಂದಿಸಿದರು.