ಆಟೋ ಚಾಲಕರಿಗೆ ಉಚಿತ ಸಮವಸ್ತ್ರ ವಿತರಣೆ: ಜಿ.ಬಿ. ವಿನಯ್ ಕುಮಾರ್
ದಾವಣಗೆರೆ, ನ.20- ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಹಾಗೂ ವಿನಯ ಮಾರ್ಗ ಟ್ರಸ್ಟ್ ವತಿಯಿಂದ ಇದೇ ದಿನಾಂಕ 26ರ ಭಾನುವಾರ ಬೆಳಿಗ್ಗೆ 11ಗಂಟೆಗೆ ನಗರದ ರೇಣುಕಾ ಮಂದಿರದಲ್ಲಿ ಆಟೋ, ಲಾರಿ, ಗೂಡ್ಸ್ ಹಾಗೂ ಟ್ಯಾಕ್ಸಿ ಚಾಲಕರಿಗೆ ಸನ್ಮಾನ ಹಾಗೂ ಅವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಇನ್‌ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 1 ಸಾವಿರ ರೂ. ನಗದು ಪುರಸ್ಕಾರ, ಬ್ಯಾಗ್, ನೆನಪಿನ ಕಾಣಿಕೆ ಹಾಗೂ ಸರ್ಟಿಫಿಕೇಟ್ ನೀಡಲಾಗುವುದು ಎಂದು ಹೇಳಿದರು.
ಆಸಕ್ತರು ಇದೇ ದಿನಾಂಕ 24ರೊಳಗೆ ಎಸ್.ಎಸ್. ಲೇಔಟ್‌ನಲ್ಲಿರುವ ತಮ್ಮ ಜನಸಂಪರ್ಕ ಕಚೇರಿಗೆ ತಲುಪಿಸುವಂತೆಯೂ, ಮಾಹಿತಿಗಾಗಿ ಮೊ.8548022544, 93806 11142ಗೆ ಸಂಪರ್ಕಿಸಬಹುದು. ಪದವಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ಮುಂದೆ ಯಾವ ವಿಷಯ ಓದಬೇಕು ಎಂಬ ಬಗ್ಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಒಂದು ಗಂಟೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದಾಗಿ ಹೇಳಿದ ವಿನಯ್ ಕುಮಾರ್, ಆರ್ಥಿಕ ಹಿನ್ನಡೆಯಿಂದ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿರುವವರನ್ನು ಗುರುತಿಸಿ ವಿನಯ್ ಮಾರ್ಗ ಟ್ರಸ್ಟ್ ನಿಂದ ಧನ ಸಹಾಯ ಮಾಡಲಾಗುವುದು ಎಂದು ಹೇಳಿದರು.