ಜಗಳೂರು,ನ.20- ಕಾಡುಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ತಾಲ್ಲೂಕು ಘಟಕದಿಂದ ತಾಲ್ಲೂಕು ಕಚೇರಿ ಮುಂದೆ ಸಾಂಕೇತಿಕ ಧರಣಿ ಹಾಗೂ ಬೃಹತ್ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಕಾಡುಗೊಲ್ಲ ಯುವ ಸೇನೆ ಜಿಲ್ಲಾಧ್ಯಕ್ಷ ಎಚ್.ಎಂ. ಹೊಳೆ ಮಹಾಲಿಂಗಪ್ಪ ಅವರು, ಕಾಡುಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರಿಸಲು ಸರ್ಕಾರ ಅನುಮೋದನೆಗೊಳಿಸಿ ಕೇಂದ್ರಕ್ಕೆ ಕಡತವನ್ನು ಕಳಿಸಿ 9 ವರ್ಷಗಳು ಕಳೆದರೂ ಸಹ ಕೇಂದ್ರದ ಬಿಜೆಪಿ ಸರ್ಕಾರ ಈವರೆಗೂ ಯಾವುದೇ ಕ್ರಮಗೊಂಡಿಲ್ಲ ಎಂದು ಆರೋಪಿಸಿದರು.
ಇಂದಿಗೂ ಕಾಡುಗೊಲ್ಲರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದ್ದು, ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ತನ್ನದೇ ಜಾತಿ ಪ್ರಮಾಣ ಪತ್ರ ಪಡೆಯಲು ಹೋರಾಟ ಮಾಡಲಾಗುತ್ತಿದೆ ಎಂದರು.
ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ಕೊಟ್ಟು ಕಾಡುಗೊಲ್ಲ ಜಾತಿ ಪ್ರಮಾಣ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಕಾಡುಗೊಲ್ಲರಹಟ್ಟಿಗಳನ್ನು ಗುರುತಿಸಿ ಸಾಮಾಜಿಕ, ಸಾಂಸ್ಕೃತಿಕ ಜೀವನವನ್ನು ಅಧ್ಯಯನ ಮಾಡಿ, ಸ್ಥಳ ಪರಿಶೀಲಿಸಿ, ಪಂಚನಾಮೆ ಮಾಡಿ ಕಾಡುಗೊಲ್ಲರಿಗೆ ಪ್ರವರ್ಗ 1ರಲ್ಲಿ ಕಾಡುಗೊಲ್ಲ ಎಂದು ಜಾತಿ ಪ್ರಮಾಣ ಪತ್ರ ನೀಡಲು ಅಗತ್ಯಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರೂ ಪಟಭದ್ರ ಹಿತಾಸಕ್ತಿಗಳು ರಾಜ್ಯದಲ್ಲಿ ಕಾಡುಗೊಲ್ಲರೇ ಇಲ್ಲ, ಇರುವುದೆಲ್ಲಾ ಬರಿ ಗೊಲ್ಲರೆ ಎಂದು ಸುಳ್ಳು ಮಾಹಿತಿ ನೀಡಿ ಅಧಿಕಾರಿ ಮತ್ತು ಸರ್ಕಾರವನ್ನು ದಾರಿ ತಪ್ಪಿಸುತ್ತಿರುವುದು ದುರಂತವಾಗಿದೆ ಎಂದು ಕಿಡಿಕಾರಿದರು.
ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದರೂ ನಯಾಪೈಸೆ ಹಣ ಬಿಡುಗಡೆ ಮಾಡದೇ, ಆಡಳಿತಾತ್ಮಕ ಅಧಿಕಾರಿಗಳನ್ನೂ ನೇಮಕ ಮಾಡದೇ ಕಾಡುಗೊಲ್ಲರನ್ನು ಚುನಾ ವಣೆಯ ಮತ ಬ್ಯಾಂಕಾಗಿ ಮಾಡಿಕೊಂಡಿ ರುವುದು ಖಂಡನೀಯ ಎಂದರು.
ಈ ಕೂಡಲೇ ಕಾಡುಗೊಲ್ಲ ನಿಗಮಕ್ಕೆ ಕಾಡುಗೊಲ್ಲ ಸಮುದಾಯದವರನ್ನೇ ಅಧ್ಯಕ್ಷ ರನ್ನಾಗಿ ನೇಮಕ ಮಾಡಿ ಸುಮಾರು 40 ಕೋಟಿ ಹಣವನ್ನು ಬಿಡುಗಡೆ ಮಾಡಿ, ಯುವ ಕರಿಗೆ ಸ್ವಯಂ ಉದ್ಯೋಗ, ನೇರ ಸಾಲ, ಗಂಗಾ ಕಲ್ಯಾಣ, ವಾಹನ ಸೌಲಭ್ಯ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಇಲ್ಲಿನ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಕುರಿ, ಮೇಕೆ, ಎಮ್ಮೆ, ಹಸುಗಳೊಂದಿಗೆ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಸುಂಕಪ್ಪ, ತಾಲೂಕಾಧ್ಯಕ್ಷ ಹೊನ್ನಮರಡಿ ಕೃಷ್ಣಮೂರ್ತಿ, ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿಗೌಡ, ಜಿ.ಆರ್. ಇಂದ್ರೇಶ್, ಮಾಕುಂಟೆ ಪ್ರಕಾಶ್, ಲಿಂಗರಾಜ್, ಬಾಲಕೃಷ್ಣ, ಜಮ್ಮಪ್ಪ, ನಿವೃತ್ತ ಪಿಎಸ್‍ಐ ಚಿಕ್ಕಣ್ಣ, ಜಮ್ಮಾಪುರ ತಿಪ್ಪೇಸ್ವಾಮಿ, ಬಾಲರಾಜ್, ಮಂಜುನಾಥ್, ಚಿತ್ತಪ್ಪ, ಅಮರೇಂದ್ರಪ್ಪ, ಮಹೇಶ್, ಗುಡ್ಡಪ್ಪ, ಎ.ರಂಗಪ್ಪ, ಶಿವಣ್ಣ, ಪಲ್ಲಾಗಟ್ಟೆ ಕರಿಯಪ್ಪ, ನಾಗಣ್ಣ, ಜೀವಣ್ಣ ಮುಂತಾದವರು ಇದ್ದರು.