ದಾವಣಗೆರೆ, ನ. 16- ಎರಡು ವರ್ಷದ ಮಗುವಿನ ಮೇಲೆ ಸುಡುವ ಬಿಸಿ ನೀರು ಬಿದ್ದು ಗಂಭೀರವಾಗಿ ಗಾಯಗೊಂಡು ಸಾರ್ವಜನಿಕ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದ ಪೋಷಕರಿಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಆಸರೆಯಾಗಿದ್ದಾರೆ.
ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಕೋಲ್ಕುಂಟೆ ಗ್ರಾಮದ ಬಸವರಾಜ್ ಮತ್ತು ಅಂಜಿನಮ್ಮ ದಂಪತಿಯ ಪುತ್ರ ಮೈಲಾರಿ (2) ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನಿನ್ನೆ ಸಂಜೆ ಮಗುವಿನ ಪೋಷಕರು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸ್ನಾನ ಮಾಡಲು ಬಿಸಿ ನೀರು ಕಾಯಿಸಿ ಇಟ್ಟಿದ್ದರು. ಈ ಸಂದರ್ಭದಲ್ಲಿ ಮಗು ಸುಡುವ ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಈ ಘಟನೆ ನಡೆದಿದೆ. ಕೂಡಲೇ ಪೋ ಷಕರು ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದಾರೆ. ಮಗುವಿಗೆ ಚಿಕಿತ್ಸೆ ಕೊಡಲು ಸೌಲಭ್ಯ ಇಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದಾರೆ.
ಅಲ್ಲಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಹೋದಾಗ ಲಕ್ಷಾಂತರ ರೂ. ಖರ್ಚು ಆಗುತ್ತದೆ ಎಂದು ಹೇಳಿದ್ದಾರೆ. ಇದರಿಂದ ವಿಚಲಿತರಾದ ಪೋಷಕರು, ದಿಕ್ಕು ತೋಚದೇ ಅಂದು ರಾತ್ರಿ 10.40ರ ಸುಮಾರಿನಲ್ಲಿ ಶಾಸಕ ಬಸವಂತಪ್ಪ ಅವರನ್ನು ಸಂಪರ್ಕಿಸಿ, ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಜಿಲ್ಲಾಸ್ಪತ್ರೆಗೆ ದೌಡಾಯಿಸಿದ ಶಾಸಕರು, ಮಗುವಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಮಗುವಿನ ಪೋಷಕರಿಗೆ ಶಾಸಕರು 10 ಸಾವಿರ ಧನ ಸಹಾಯ ಮಾಡಿದ್ದಲ್ಲದೇ, ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ, ಈ ಮಗುವಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿ, ಆಂಬ್ಯುಲೆನ್ಸ್ ಮೂಲಕ ಕಳುಹಿಸಿ ನೆರವಾಗಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಪಡಿತರ ಚೀಟಿ ಹೊಂದಿದ ಬಡ ಕುಟುಂಬಗಳಿಗೆ ಉಚಿತ ಚಿಕಿತ್ಸೆ ಇದೆ. ಆದರೆ ಈ ಕುಟುಂಬಕ್ಕೆ ಪಡಿತರ ಚೀಟಿ ಇಲ್ಲ. ಹೀಗಾಗಿ ಮಗುವಿನ ಚಿಕಿತ್ಸೆಗಾಗಿ ಈ ಕುಟುಂಬ ಪರದಾಡಿದೆ.
ನಂತರ ಸಿ.ಜಿ. ಆಸ್ಪತ್ರೆಯ ಜಿಲ್ಲಾ ಸರ್ಜನ್, ನಿವಾಸಿ ವೈದ್ಯಾಧಿಕಾರಿ ಸೇರಿದಂತೆ, ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ ಶಾಸಕರು, ಕೋವಿಡ್ ಸಂದರ್ಭದಲ್ಲಿ ಬಂದಾಗಿದ್ದ ಜಿಲ್ಲಾಸ್ಪತ್ರೆಯ ಸುಟ್ಟ ಗಾಯಗಳ ವಿಭಾಗವನ್ನು ಸರಿಯಾಗಿ ಉಪಯೋಗಿಸುತ್ತಿಲ್ಲ. ವೆಂಟಿಲೇಟರ್ಗಳು ಇಲ್ಲ, ಐಸಿಯು ವಾರ್ಡ್ ಇಲ್ಲ. ಹೀಗಾದರೆ ರೋಗಿಗಳನ್ನು ಕಾಪಾಡುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ಸುಟ್ಟ ಗಾಯಗಳ ವಿಭಾಗದಲ್ಲಿ ಹೆಚ್ಚು ಸಂಖ್ಯೆಗಳ ವೆಂಟಿಲೇಟರ್, ಐಸಿ ವಾಡ್೯ಗಳ ಸೌಲಭ್ಯ ಕಲ್ಪಿಸಬೇಕು. ಬಡ ವರ್ಗದ ಯಾವುದೇ ರೋಗಿಗಳು ಆಸ್ಪತ್ರೆಗೆ ಬಂದರೆ ಅವರು ಪರದಾಡುವ ಸ್ಥಿತಿ ನಿರ್ಮಾಣವಾಗಬಾರದು. ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಿ ಮನೆಗೆ ಕಳುಹಿಸುವ ಕೆಲಸ ಆಗಬೇಕು. ಇನ್ಮುಂದೆ ಚಿಕಿತ್ಸೆ ಇಲ್ಲದೆ ಶಾಸಕರು, ಸಚಿವರಿಗೆ ಫೋನ್ ಮಾಡುವ ಸನ್ನಿವೇಶ ಸೃಷ್ಟಿ ಮಾಡಬಾರದು ಎಂದು ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.