ಗ್ರಾಮಸ್ಥರ ಸಮಸ್ಯೆ ಆಲಿಸಿದ ಶಾಸಕ ಬಸವಂತಪ್ಪ

ಗ್ರಾಮಸ್ಥರ ಸಮಸ್ಯೆ  ಆಲಿಸಿದ ಶಾಸಕ ಬಸವಂತಪ್ಪ

ದಾವಣಗೆರೆ, ನ. 15 – ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದ ಶಾಸಕ ಕೆ.ಎಸ್.ಬಸವಂತಪ್ಪ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.

ಮಂಗಳವಾರ ಬೆಳಿಗ್ಗೆ ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಕಂಸಾಗರ, ಯಲೋದಹಳ್ಳಿ, ದಾಗಿನ ಕಟ್ಟೆ, ಬಸವಾಪಟ್ಟಣ, ಮರಬನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಇತ್ತೀಚೆಗೆ ಮೈಮೇಲೆ ಬಿಸಿ ಸಾಂಬಾರು ಬಿದ್ದು ಬಾಲಕ ಸಮರ್ಥ್‌ ಮೃತಪಟ್ಟಿದ್ದ. ಯಲೋದಹಳ್ಳಿ ಗ್ರಾಮದ ಶೃತಿ ಹನುಮಂತಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬ  ಸದಸ್ಯರಿಗೆ ಸಾಂತ್ವನ ಹೇಳಿದರು. 

ಬಳಿಕ ಕಂಸಾಗರಕ್ಕೆ ಭೇಟಿ ನೀಡಿದ ಶಾಸಕರು, ಗ್ರಾಮದಲ್ಲಿ ನಡೆಯುತ್ತಿರುವ ಚರಂಡಿ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ದೇವಸ್ಥಾನ ಅಭಿವೃದ್ಧಿ, ರಸ್ತೆಯ ಅಭಿವೃದ್ಧಿ ಮಾಡುವಂತೆ ಮನವಿ ಸಲ್ಲಿಸಿದರು. ಇದೇ ವೇಳೆ ಧಾರಾಕಾರವಾಗಿ ಸುರಿದ ಮಳೆಗೆ ಮನೆಗಳು ಬಿದ್ದ ನಿರಾಶ್ರಿತರಾದವರಿಗೆ, ಗ್ರಾಮ ಪಂಚಾಯಿತಿಯಿಂದ ಮನೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು. ನಂತರ ಗ್ರಾಮದಲ್ಲಿ ಮಳೆಗೆ ಬಿದ್ದ ಮನೆಗಳನ್ನು ವೀಕ್ಷಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮನೆಗಳನ್ನು ನಿರ್ಮಾಣ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಅಲ್ಲಿಂದ ಸಾಗರಪೇಟೆಗೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು. ಈ ವೇಳೆ ಜಮೀಯಾ ಮಸೀದಿ, ಕಬರಸ್ತಾನ್ ಅಭಿವೃದ್ಧಿಗೆ ಸರ್ಕಾರ 40 ಲಕ್ಷ ರೂ. ಬಿಡುಗಡೆಯಾದ ಆದೇಶ ಪತ್ರವನ್ನು ಮುಸ್ಲಿಂ ಮುಖಂಡರಾದ ಆಸೀಫ್, ಅಯೂಬ್ ಖಾನ್ ಅವರಿಗೆ ವಿತರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ರಾಜ್ಯ ಸರ್ಕಾರ  ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ ಮತ್ತು ವಕ್ಫ್ ಬೋರ್ಡ್‌ ಮೂಲಕ ಮಸೀದಿ, ಖಬರಾಸ್ತಾನ್ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಅದರಂತೆ ಸಾಗರಪೇಟೆಯ ಜಾಮೀಯಾ ಮಸೀದಿ, ಖಬರಾಸ್ತಾನ್ ಅಭಿವೃದ್ಧಿಗೆ 40 ಲಕ್ಷ ರೂ. ಬಿಡುಗಡೆ ಮಾಡಿದೆ. ಅದೇ ರೀತಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಎಪಿಎಂಸಿ ಮಾಜಿ ಸದಸ್ಯ ಕಂಸಾಗರ ಜಯಣ್ಣ, ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜೊ.ಗೌಡರು, ಬಿ.ಜಿ.ನಾಗ ರಾಜ್, ಕಾಂತರಾಜ್ ಸೇರಿದಂತೆ ಗ್ರಾಮಸ್ಥರಿದ್ದರು.

error: Content is protected !!