ವ್ಯಾಯಾಮ, ಉತ್ತಮ ಆಹಾರ ಕ್ರಮದಿಂದ ಮಧುಮೇಹ ತಡೆ ಸಾಧ್ಯ

ವ್ಯಾಯಾಮ, ಉತ್ತಮ ಆಹಾರ ಕ್ರಮದಿಂದ ಮಧುಮೇಹ ತಡೆ ಸಾಧ್ಯ

ಸಕ್ಕರೆ ಕಾಯಿಲೆ ತಜ್ಞ ಮಂಜುನಾಥ್ ಆಲೂರು ಪ್ರತಿಪಾದನೆ

ದಾವಣಗೆರೆ, ನ. 12- ದೈಹಿಕ ವ್ಯಾಯಮ ಮತ್ತು ಉತ್ತಮ ಆಹಾರ ಕ್ರಮದಿಂದ ಮಧುಮೇಹ ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ಸಕ್ಕರೆ ಕಾಯಿಲೆ ತಜ್ಞ ಡಾ. ಮಂಜುನಾಥ್ ಆಲೂರು ಹೇಳಿದರು.

ನಗರದ ಆಲೂರು ಚಂದ್ರಶೇಖರಪ್ಪ ಮೆಮೋರಿಯಲ್ ಟ್ರಸ್ಟ್ ಮತ್ತು ಆಸ್ಪತ್ರೆ ಯಲ್ಲಿ ದಿ. ಆಲೂರು ಚಂದ್ರಶೇಖರಪ್ಪ ಹಾಗೂ ದಿ. ಸುನಂದಮ್ಮ ಚಂದ್ರಶೇಖರಪ್ಪ ಅಲೂರು ಇವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ವಿಶ್ವ ಮಧುಮೇಹ ಮೇಳದಲ್ಲಿ ರೋಗ ನಿಯಂತ್ರಣ ಹಾಗೂ ರೋಗ ಬಾರದಂತೆ ಕೈಗೊಳ್ಳಬಹುದಾದ ಮಾರ್ಗೋಪಾಯಗಳ ಬಗ್ಗೆ ಮಾತನಾಡಿದರು.

ನಿಯಮಿತ ಆರೋಗ್ಯ ಪರೀಕ್ಷೆಗಳು ಮಧು ಮೇಹವನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಆರೋಗ್ಯಕರ ಆಹಾರ, ನಿಯಮಿತ ದೈಹಿಕ ಚಟು ವಟಿಕೆ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿ ಕೊಳ್ಳುವ ಮೂಲಕ ನಿರ್ವಹಿಸಬಹುದು ಎಂದರು.

ಸೊಪ್ಪು, ತರಕಾರಿ, ಬೇಳೆಕಾಳುಗಳ ಪಲ್ಯವನ್ನು ಹೆಚ್ಚಾಗಿ ಬಳಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ತರಬಹುದು. ಅನ್ನ-ಸಾರು, ಚಪಾತಿ, ರೊಟ್ಟಿ ಇತ್ಯಾದಿಗಳನ್ನು ಮಿತವಾಗಿ ಬಳಸಿ, ದ್ವಿದಳ ಧಾನ್ಯಗಳ, ಸೊಪ್ಪು, ತರಕಾರಿ ಪಲ್ಯವನ್ನು ಯಥೇಚ್ಛವಾಗಿ ಊಟದಲ್ಲಿ ಬಳಕೆ ಮಾಡುವಂತೆ ಸಲಹೆ ನೀಡಿದರು.

ಆಹಾರ ಕ್ರಮದಲ್ಲಿ ಬದಲಾವಣೆ (ಪಲ್ಯೆ ಜಾಸ್ತಿ ತಿನ್ನುವುದು), ದೇಹಕ್ಕೆ ಬೇಕಾದ ಅಗತ್ಯ ವ್ಯಾಯಾಮ, ಯೋಗ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು. ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಎಚ್ಚರ ವಹಿಸುವುದು, ಚಿಂತೆ ಬಿಟ್ಟು ಚಿಂತನೆಯತ್ತ ಚಿತ್ತ ಹರಿಸುವುದು, ವೈದ್ಯರ ಸಲಹೆ ಮೇರೆಗೆ ಔಷಧಿಗಳನ್ನು ಸೇವಿಸುವ ಕಡೆ ಗಮನ ಹರಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ವರುಣ್ ಚಂದ್ರ ಆಲೂರು, ಡಾ. ಸುಜಾತ, ಡಾ. ರವೀಂದ್ರ, ಶೈಲಜಾ ಮತ್ತಿತರರು ಉಪಸ್ಥಿತರಿದ್ದರು.  ಸಕ್ಕರೆ ಕಾಯಿಲೆ ಕುರಿತು ಉಚಿತ ತಪಾಸಣೆ, ಆರೋಗ್ಯ ಸಲಹೆಗಳನ್ನು ಈ ಸಂದರ್ಭದಲ್ಲಿ ನೀಡಲಾಯಿತು. 

error: Content is protected !!