ರಂಗ ಕಲೆಗೆ ಉತ್ತೇಜನ ಅಗತ್ಯ: ಪ್ರಭಾ ಮಲ್ಲಿಕಾರ್ಜುನ್‌

ರಂಗ ಕಲೆಗೆ ಉತ್ತೇಜನ ಅಗತ್ಯ: ಪ್ರಭಾ ಮಲ್ಲಿಕಾರ್ಜುನ್‌

ದಾವಣಗೆರೆ, ನ. 12- ಭಾರತೀಯ ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕಾಗಿದೆ. ನಾಟಕಗಳಿಗೆ ಉತ್ತೇಜನ ನೀಡುವ ಮೂಲಕ ರಂಗ ಕಲೆಯನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದು ಎಸ್.ಎಸ್.ಕೇರ್ ಟ್ರಸ್ಟ್ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಕರೆ ನೀಡಿದರು.

ನಗರದ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಪ್ರತಿಮಾ ಸಭಾ ಹಾಗೂ ಅನ್ವೇಷಕರು ಆರ್ಟ್ ಫೌಂಡೇಶನ್ ಸಹಯೋಗದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅರ್ಪಿಸುವ ನಾಡೋಜ ಹಂಪಾ ನಾಗರಾಜಯ್ಯ ವಿರಚಿತ ದೇಸಿಕಾವ್ಯ `ಚಾರುವಸಂತ’ ನಾಟಕ ಪ್ರದರ್ಶನವನ್ನು ನಗಾರಿ ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯು ಕಲೆ, ಸಂಸ್ಕೃತಿ, ನಾಟಕಗಳಿಗೆ ಹೆಚ್ಚು ಮಹತ್ವ ನೀಡುವ ಮೂಲಕ ದೇಶಾದ್ಯಂತ ಸಾಮಾಜಿಕ ಸಂದೇಶ ಸಾರುವ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಾ ಬರುತ್ತಿದೆ ಎಂದರು.

ಇಂದಿನ ಆಧುನಿಕ ಯುಗದಲ್ಲಿ ಸಿನಿಮಾ, ಟಿವಿ ಭರಾಟೆಯಲ್ಲಿ ನಾಟಕ ಕಲೆ ಕ್ಷೀಣಿಸುತ್ತಿರುವ ಸಂದರ್ಭದಲ್ಲೂ ದಾವಣಗೆರೆಯ ರಂಗಾಸಕ್ತರು ನಾಟಕಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದರು.

ಬಾಪೂಜಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ಮಾತನಾಡಿ, ಹೆಸರಾಂತ ಲೇಖಕ ಹಂಪಾ ನಾಗರಾಜಯ್ಯ ಅವರ `ಚಾರುವಸಂತ’ ಭಿನ್ನವಾದ, ವಿಶಿಷ್ಟವಾದ ದೇಸಿ ಕಾವ್ಯವಾಗಿದ್ದು, ರಂಗ ರೂಪಕ್ಕಿಳಿಸಿದ ನಾ.ದಾ. ಶೆಟ್ಟಿ ಅವರ ಈ ನಾಟಕವನ್ನು ಆಳ್ವಾಸ ರಂಗ ಅಧ್ಯಯನ ಕೇಂದ್ರದ ಕಲಾವಿದರು ಜೀವನರಾಂ ಸುಳ್ಯ ಅವರ ನಿರ್ದೇಶನದಲ್ಲಿ ಮನೋಜ್ಞವಾಗಿ ಅಭಿನಯಿಸುತ್ತಿರುವುದೇ ವಿಶೇಷ ಎಂದರು.

ನಾಟಕಗಳು ಮನಸ್ಸಿಗೆ ಮುದ ನೀಡುವ ಜೊತೆಗೆ ಹೊಸ ಪ್ರಪಂಚವನ್ನೇ ಸೃಷ್ಠಿಸುತ್ತವೆ. ಸಾಂಸ್ಕೃತಿಕ ಶಕ್ತಿಯಿದ್ದರೆ ರಾಜಕೀಯ, ಸಾಮಾಜಿಕ ವ್ಯವಸ್ಥೆ ಕೂಡ ಚನ್ನಾಗಿರಲು ಸಾಧ್ಯ. ತನ್ಮೂಲಕ ರಂಗ ಸಂಸ್ಕೃತಿ ಚನ್ನಾಗಿ ಬೆಳೆಯುತ್ತದೆ ಎಂದು ಹೇಳಿದರು.

ರಂಗ ನಿರ್ದೇಶಕ ಜೀವನರಾಂ ಸುಳ್ಯ ಮಾತನಾಡಿ, ದಾವಣಗೆೆರೆ ಜನತೆ ರಂಗ ಕಲೆಯನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತಿರುವುದಕ್ಕೆ ಇಂದಿನ ರಂಗಾಸಕ್ತರೇ ಸಾಕ್ಷಿ. ನಿಗದಿತ ಸಮಯಕ್ಕೂ ಮುನ್ನವೇ ಬಂದು ಆಸೀನರಾಗಿರುವುದು ನಾನು ನೋಡುತ್ತಿರುವುದು ಇದೇ ಮೊದಲು ಎಂದು ದಾವಣಗೆರೆ ಜನರಲ್ಲಿರುವ ನಾಟಕದ ಗೀಳಿನ ಬಗ್ಗೆ ಪ್ರಶಂಸಿಸಿದರು.

ಪ್ರತಿಮಾ ಸಭಾದ ಕಾರ್ಯದರ್ಶಿ ಬಾ.ಮ. ಬಸವರಾಜಯ್ಯ, ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್, ನೀವು-ನಾವು ಸಾಂಸ್ಕೃತಿಕ ವೇದಿಕೆಯ ಎಸ್.ಎಸ್. ಸಿದ್ಧರಾಜು ಸೇರಿದಂತೆ ಅನೇಕರಿದ್ದರು. 

ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ಅಭಿನಯಿಸಿದ ಹಂಪನಾ ವಿರಚಿತ, ಜೀವನರಾಂ ಸುಳ್ಯ ನಿರ್ದೇಶನದ `ಚಾರು ವಸಂತ’ ನಾಟಕ ಸಹೃದಯರ ಮನ ಗೆದ್ದಿತು.

error: Content is protected !!