ಭರಮಸಾಗರ ಕೆರೆ ವೀಕ್ಷಣೆಗೆ ನಾಳೆ ಸಿರಿಗೆರೆ ಶ್ರೀಗಳು

ಭರಮಸಾಗರ ಕೆರೆ ವೀಕ್ಷಣೆಗೆ ನಾಳೆ ಸಿರಿಗೆರೆ ಶ್ರೀಗಳು

ಭರಮಸಾಗರ, ನ.9- ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಸೇರಿದ 25 ಕೆರೆಗಳಿಗೆ ಸಿರಿಗೆರೆ ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾ ಚಾರ್ಯ ಸ್ವಾಮೀಜಿ ಮೂರು ದಿನಗಳ ಕಾಲ ಭೇಟಿ ನೀಡಿ ವೀಕ್ಷಿಸುವರು.

ನಾಳೆ ದಿನಾಂಕ 10ರಂದು ಕಾತ್ರಾಳು, ಸಾದರಹಳ್ಳಿ, ಚಿಕ್ಕಪುರ, ಕೊಡಗವಳ್ಳಿ, ವಡ್ಡರ ಸಿದ್ದವ್ವನಹಳ್ಳಿ, ಲಕ್ಷ್ಮಿಸಾಗರ, ಚಿಕ್ಕಬೆನ್ನೂರು, ಚಿಕ್ಕಬೆನ್ನೂರು ಗೋಮಾಳ, ಕೊಳಹಾಳು ಜಿನುಗು, ಕೊಳಹಾಳು ಗೊಲ್ಲರಹಟ್ಟಿ ಮತ್ತು ಕೊಳಹಾಳು ಕೆರೆಗಳ ವೀಕ್ಷಣೆ ನಡೆಸುವರು.

ದಿನಾಂಕ 11 ರಂದು ಭರಮಸಾಗರ ಚಿಕ್ಕಕೆರೆ, ಬೇವಿನಹಳ್ಳಿ, ನಂದಿಹಳ್ಳಿ, ಪಂಜಯ್ಯನ ಹಟ್ಟಿ, ಯಮ್ಮನಗಟ್ಟ, ಬಹದ್ದೂರ್ ಘಟ್ಟ, ಕೊಗುಂಡೆ, ಕಾಕಬಾಳು, ಕಾಲ್ಗೆರೆ, ಆಜಾದ್ ನಗರ, ಇಸಾಮುದ್ರ ಕೆರೆಗಳ ವೀಕ್ಷಿಸುವರು.

ದಿನಾಂಕ 12ರಂದು ಮುದ್ದಾಪುರ, ಯಳಗೋಡು, ಹುಲ್ಲೇಹಾಳು, ಹುಲ್ಲೇಹಾಳು ಗೊಲ್ಲರಹಟ್ಟಿ, ಅಡವಿಗೊಲ್ಲರಹಟ್ಟಿ, ನಲ್ಲಿಕಟ್ಟೆ ಕೆರೆಗಳಿಗೆ ಭೇಟಿ ನೀಡುವರು.

ಭರಮಸಾಗರ ಏತ ನೀರಾವರಿ ಯೋಜನೆಯನ್ನು ರೂ. 525 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದು 56 ಕಿ.ಮೀ. ದೂರದವರೆಗೂ ಪೈಪುಗಳನ್ನು ಹಾಕಿ ಪೂರ್ಣಗೊಳಿಸಿರುವ ರಾಜ್ಯದ ಮೊದಲ ಯೋಜನೆ ಎಂದು ಹೆಸರಾಗಿದೆ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಕಣ್ಗಾವಲಿನಲ್ಲಿ ಆರಂಭವಾದ ಈ ಯೋಜನೆಯು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಂಡು 2022ರ ಸೆ. 29 ರಂದು ಮೊದಲ ಬಾರಿಗೆ ತುಂಗಭದ್ರಾ ನದಿಯಿಂದ ಭರಮಸಾಗರ ಕೆರೆಗೆ ಪೈಪುಗಳ ಮೂಲಕ ನೀರು ಹರಿದು ಬಂದಿತ್ತು.

ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಯೋಜನೆ ಜಾರಿಗೊಳ್ಳುವಂತೆ ಮಾಡಿದರು. ತುಂಗಭದ್ರಾ ನದಿಯಿಂದ ಭರಮಸಾಗರ ಕೆರೆಗೆ ನೀರು ಬಂದು ಶೇಖರಣೆಗೊಂಡಂತೆ ವ್ಯಾಪ್ತಿಯ 42 ಕೆರೆಗಳಿಗೂ ನೀರು ಹರಿಸಲಾಗಿದೆ. 

ಮೊದಲ ಹಂತದಲ್ಲಿ ಮೂರು ದಿನಗಳ ಕಾಲ ಶ್ರೀಗಳು ಹಲವು ಕೆರೆಗಳಿಗೆ ಭೇಟಿ ನೀಡಿ ನೀರು ಮತ್ತು ಕೆರೆಯ ಕುಂದುಕೊರತೆಗಳನ್ನು ವೀಕ್ಷಿಸುವರು. ಕರ್ನಾಟಕ ನೀರಾವರಿ ನಿಗಮದ ಇಂಜಿನಿಯರ್‌ಗಳು ಕಾಮಗಾರಿ ನಿರ್ವಹಿಸಿದ ಎಸ್‌ಎಸ್‌ಸಿ ಕಂಪನಿ ಅಧಿಕಾರಿಗಳು ಸಹ ಮೂರು ದಿನಗಳ ಭೇಟಿ ಕಾರ್ಯದಲ್ಲಿ ಭಾಗವಹಿಸುವರು. ಯೋಜನೆಯ ವ್ಯಾಪ್ತಿಯಲ್ಲಿ ಕೆಲವು ಕೆರೆಗಳಿಗೆ ನೀರು ಸರಾಗವಾಗಿ ಬರುತ್ತಿದ್ದು ಇನ್ನೂ ಕೆಲವು ಕೆರೆಗಳಿಗೆ ನೀರಿನ ಹರಿವಿನ ಪ್ರಮಾಣ ಕಡಿಮೆ ಇದೆ. ಕೆಲವು ಕೆರೆಗಳಿಗೆ ನೀರು ಬರುತ್ತಿಲ್ಲವೆಂಬ ದೂರುಗಳಿದ್ದು, ಈ ಬಗ್ಗೆ ಜನರು ಶ್ರೀಗಳಿಗೆ ತಿಳಿಸುವರು.

error: Content is protected !!