ಮಲೇಬೆನ್ನೂರು, ನ. 8- ಬುಧವಾರ ಸಂಜೆ 4 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮಲೇಬೆನ್ನೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಸಂತಸಗೊಂಡಿದ್ದಾರೆ. ಈ ವಾರದಲ್ಲೇ ಎರಡು ಭಾರಿ ಹಿಂಗಾರು ಮಳೆ ಉತ್ತಮವಾಗಿ ಬಂದಿದ್ದು, ತೋಟ ಹಾಗೂ ಭತ್ತದ ಬೆಳೆಗೆ ಅನುಕೂಲವಾಗಿದೆ. ಅಲ್ಲದೇ, ಬಿಸಿಲಿನ ವಾತಾವರಣವನ್ನೂ ತಂಪುಗೊಳಿಸಿದೆ.
ಮಲೇಬೆನ್ನೂರು ಪಟ್ಟಣದಲ್ಲಿ ಸುರಿದ ಮಳೆಯಿಂದಾಗಿ ಚರಂಡಿಗಳು ತುಂಬಿ ಹರಿದ ಪರಿಣಾಮ, ಶಿವಮೊಗ್ಗ ರಸ್ತೆ, ಜಲಾವೃತಗೊಂಡಿತು. ಉತ್ತಮ ಮಳೆಯಾಗಿದ್ದರಿಂದ ಸದ್ಯ ರೈತರಿಗೆ ನೀರಿನ ಸಮಸ್ಯೆ ಕಡಿಮೆ ಆಗಿದೆ. ಹಾಗಾಗಿ ಭದ್ರಾ ಜಲಾಶಯದಿಂದ ನಾಲೆಗೆ ಬಿಟ್ಟಿರುವ ನೀರನ್ನು 3-4 ದಿನಗಳ ಮಟ್ಟಿಗೆ ನಿಲ್ಲಿಸುವುದು ಸೂಕ್ತಿ ಎಂದು ಕೆಲವು ರೈತರು ಅಭಿಪ್ರಾಯಪಟ್ಟಿದ್ದಾರೆ. ಈಗ ನೀರನ್ನು ಉಳಿತಾಯ ಮಾಡಿದರೆ, ಮುಂದೆ ಆ ನೀರನ್ನು ನಾವೇ ಬಳಸಿಕೊಳ್ಳಲು ಅನುಕೂಲವಾಗುತ್ತದೆ ಎಂದಿದ್ದಾರೆ.