ಕೂಡಲಸಂಗಮ ಪೀಠದ ಶ್ರೀ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿ ಆಕ್ರೋಶ
ಮಾಯಕೊಂಡ, ನ. 8- `ಪಂಚಮಸಾಲಿ ಸಮು ದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರ ಗಳು ಕೊಟ್ಟ ಮಾತು ತಪ್ಪಿ ದ್ರೋಹ ಬಗೆದಿವೆ ಎಂದು ಕೂಡಲಸಂಗಮ ಪೀಠದ ಶ್ರೀ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ನಾಲ್ಕು ವರ್ಷಗಳಿಂದಲೂ ಮೀಸಲಾತಿಗಾಗಿ ಒತ್ತಾಯಿಸಿ ಧರಣಿ, ಪಾದಯಾತ್ರೆ, ಸಮಾವೇಶ ನಡೆಸಿ, ಸರ್ಕಾರದ ಗಮನ ಸೆಳೆಯುವ ಯತ್ನ ನಡೆಸಿದೆವು. ಪಾದಯಾತ್ರೆ ಸಮುದಾಯದಲ್ಲಿ ಜಾಗೃತಿ ಮೂಡಿಸಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೀಸಲಾತಿ ನೀಡುವುದಾಗಿ ಸುಳ್ಳು ಹೇಳಿದರು. ಬಸವರಾಜ ಬೊಮ್ಮಾಯಿ ತಾಯಿ ಮೇಲೆ ಪ್ರಮಾಣ ಮಾಡಿಯೂ ಮಾತು ತಪ್ಪಿದರು. ಸುಳ್ಳಿನ ಭರವಸೆ ನೀಡಿ ಬೆಳಗಾಂನಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದನ್ನು ದಿಕ್ಕು ತಪ್ಪಿಸಿದರು.
ಸಿದ್ದರಾಮಯ್ಯ ಅವರೂ ಅಧಿಕಾರಕ್ಕೆ ಬಂದರೆ ಮೀಸಲಾತಿ ನೀಡುವುದಾಗಿ ಭರವಸೆ ನೀಡಿ, ಈಗ ಮೀಸಲಾತಿ ಚಕಾರ ಎತ್ತುತ್ತಿಲ್ಲ. ಸರ್ಕಾರದ ಗಮನ ಸೆಳೆಯಲು ಇಷ್ಟಲಿಂಗ ಪೂಜೆಯೊಂದಿಗೆ ಹೆದ್ದಾರಿ ತಡೆದು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ ಭವಿಷ್ಯಕ್ಕಾಗಿ ಮೀಸಲಾತಿ ಅತ್ಯವಶ್ಯಕ. ಸಮಾಜ ಬಾಂಧವರು ಎಚ್ಚೆತ್ತು ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು, ಎಂದು ಅವರು ಕರೆ ನೀಡಿದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಸಮಾಜದಲ್ಲಿ ಬಡವರೇ ಹೆಚ್ಚಾಗಿದ್ದಾರೆ. ನಮ್ಮವರೇ ಚುನಾವಣೆಯಲ್ಲಿ ನಮ್ಮನ್ನು ಸೋಲಿಸಲು ಪಣ ತೊಡುತ್ತಾರೆ. ಅನೇಕ ವಿದ್ಯಾರ್ಥಿಗಳು ಸರ್ಕಾರಿ ನೌಕರಿ ಸೇರಿದಂತೆ ವಿವಿಧ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಪಾದಯಾತ್ರೆ ಸಮಾಜದಲ್ಲಿ ಒಗ್ಗಟ್ಟು ಮೂಡಿಸಿದೆ.
ಮೀಸಲಾತಿ ಪಡೆಯುವುದು ನಮ್ಮ ಹಕ್ಕು. ಸಮಾಜದ, ಹೋರಾಟದ ಪ್ರತಿಫಲ ಪಡೆದು ಅನೇಕ ಶಾಸಕರು, ಸಚಿವರಾಗಿ, ಬಹುತೇಕರು ಇಂದು ಹೋರಾಟ ಬೆಂಬಲಿಸುತ್ತಿಲ್ಲ ಎಂದು ವಿಷಾದಿಸಿದರು.
ಮಾಜಿ ಮೇಯರ್ ಬಿ.ಜಿ. ಅಜಯ ಕುಮಾರ್ ಮಾತನಾಡಿ, ಮೀಸಲಾತಿ ಪಡೆಯುವುದು ಸಮಾಜದ ಹಕ್ಕು. ಪಂಚಮಸಾಲಿ ಸಮುದಾಯದವರು ಚುನಾವಣಾ ಸೋಲಿಗೆ ಅಂಜುವುದಿಲ್ಲ. ಎಂಥದೇ ಪರಿಸ್ಥಿತಿ ಬಂದರೂ ಎದೆಕೊಟ್ಟು ಸಮುದಾಯದ ರಕ್ಷಣೆ ಮಾಡಲು ಸಿದ್ದರಿದ್ದೇವೆ. ಎಲ್ಲರೂ ಒಗ್ಗೂಡಿ ನಾಡಿದ್ದು ದಿನಾಂಕ 10 ರಂದು ಬಾಡಾ ಕ್ರಾಸ್ ಬಳಿ ಇಷ್ಟಲಿಂಗ ಪೂಜೆಯೊಂದಿಗೆ ಹೆದ್ದಾರಿ ತಡೆಯುವ ಪ್ರತಿಭಟನೆ ಯಶಸ್ವಿಗೊಳಿಸಬೇಕು. ಮೀಸಲಾತಿ ಪಡೆಯದೇ ಮುಂದಿನ ಪೀಳಿಗೆಗೆ ಭವಿಷ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.
ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಗೋಪನಾಳ್ ಅಶೋಕ್, ಮಾಯಕೊಂಡ ಘಟಕದ ಅಧ್ಯಕ್ಷ ಕಾರಿಗನೂರು ಕಲ್ಲೇಶಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಅಭಿ ಕಾಟನ್ಸ್ ಬಕ್ಕೇಶಪ್ಪ, ಮಿಲಿಟರಿ ಚನ್ನಬಸವನಗೌಡ, ಪೈಲ್ವಾನ್ ಮಂಜು, ಮಾಯಕೊಂಡ ರುದ್ರೇಶ್, ಜಯಪ್ರಕಾಶ್, ಶಂಕರನಹಳ್ಳಿ ಪ್ರಭು, ಬೆಂಡಿಗೆರೆ ವಿಜಯ ಕುಮಾರ್, ನೀರ್ಥಡಿ ನಾಗರಾಜ್ ಮತ್ತಿತರರು ಇದ್ದರು.