ಹಡಗಲಿಯಲ್ಲಿ ಬರ ಅಧ್ಯಯನ ತಂಡದ ಬಿಜೆಪಿ ಮುಖಂಡ ಗೋವಿಂದ ಕಾರಜೋಳ
ಕಾಂಗ್ರೆಸ್ ಸರ್ಕಾರದ ಕಾಲ್ಗುಣದಿಂದ ರಾಜ್ಯದಲ್ಲಿ ಭೀಕರ ಬರಗಾಲ : ಕಾರಜೋಳ ವ್ಯಂಗ್ಯ
ಹೂವಿನಹಡಗಲಿ, ನ. 8- ಕೇಂದ್ರ ತಂಡ ರಾಜ್ಯಕ್ಕೆ ಬಂದಾಗ ಸರಿಯಾದ ಮಾಹಿತಿ ಕೊಡುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ವಿನಾಕಾರಣ ಕೇಂದ್ರದ ಮೇಲೆ ಆರೋಪ ಮಾಡಿ, ಬರ ಪರಿಹಾರ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ದೂರು ತರುವುದು ಖಂಡನೀಯ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಗೋವಿಂದ ಕಾರಜೋಳ ಕಿಡಿಕಾರಿದರು.
ಹಡಗಲಿ ತಾಲ್ಲೂಕಿನಲ್ಲಿ ಬರ ಅಧ್ಯಯನಕ್ಕಾಗಿ ತಮ್ಮ ತಂಡದೊಂದಿಗೆ ಆಗಮಿಸಿದ ಸಂದರ್ಭದಲ್ಲಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಿದ್ದರು.
ರಾಜ್ಯದ ಜನಕ್ಕೆ ಬೇಕಾದ ಪರಿಹಾರ ಕಾರ್ಯಗಳನ್ನು ಕೈಗೊಳ್ಳದೆ, ದಿವ್ಯ ನಿರ್ಲಕ್ಷ್ಯ ತೋರಲಾಗುತ್ತಿದೆ. ಮೂರು ಜನ ನಾಯಕರು ಮುಖ್ಯಮಂತ್ರಿ ಪಟ್ಟಕ್ಕಾಗಿ ಗುದ್ದಾಡುತ್ತಿದ್ದಾರೆ. ಈಗಾಗಲೇ ಸರ್ಕಾರ ಮೂರು ಹೋಳಾಗಿದೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ಸರ್ಕಾರದ ಕಾಲ್ಗುಣದಿಂದ ರಾಜ್ಯದಲ್ಲಿ ಕಳೆದ 50 ವರ್ಷಗಳಲ್ಲಿ ಕಂಡರಿಯದ ಭೀಕರ ಬರಗಾಲ ಉಂಟಾಗಿದೆ ಎಂದು ಅವರು ವ್ಯಂಗ್ಯವಾಡಿದರು.
ಈಗಾಗಲೇ ಹಿಂಗಾರು ಮತ್ತು ಮುಂಗಾರು ಎರಡೂ ಹಂಗಾಮುಗಳು ರೈತರನ್ನ ಕೈಹಿಡಿಯಲಿಲ್ಲ. ರೈತರು ಸಂಕಷ್ಟದಲ್ಲಿದ್ದರೂ, ಸರ್ಕಾರ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿಲ್ಲ. ಹಳ್ಳಿಗಳಲ್ಲಿ ಹೋಬಳಿ ಮಟ್ಟದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದ್ದರೂ, ಸರ್ಕಾರ ಗಮನ ಹರಿಸುತ್ತಿಲ್ಲ. ಕೇವಲ ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ.
ರಾಜ್ಯದ ಜನ ಇದನ್ನೆಲ್ಲಾ ಗಮನಿಸುತ್ತಿದ್ದಾರೆ. ಕೂಡಲೇ ಕಾಂಗ್ರೆಸ್ ಸರ್ಕಾರ ಗೋ ಶಾಲೆಗಳನ್ನು ಮತ್ತು ಮೇವು ಬ್ಯಾಂಕನ್ನು ತೆರೆಯಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಬಿಜೆಪಿ ವಿಪಕ್ಷವಾಗಿ ಕೆಲಸ ಮಾಡುವಲ್ಲಿ ವಿಫಲವಾಗಿದೆ. ಇದುವರೆಗೂ ವಿಧಾನಸಭೆ ವಿರೋಧ ಪಕ್ಷದ ನಾಯಕನನ್ನೇ ನೇಮಿಸಿಕೊಳ್ಳಲಾಗಲಿಲ್ಲ ಎಂಬ ಪ್ರಶ್ನೆಗೆ, ವರಿಷ್ಠರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದರು. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳದೇ ಹೋದರೆ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಶಾಸಕರಾರೂ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರಲ್ಲ ಎಂಬ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಎಲ್ಲಾ ಶಾಸಕರ ಅಭಿಪ್ರಾಯವಲ್ಲ. ಕೆಲವರು ಆ ರೀತಿ ಹೇಳಿರಬಹುದು ಅಷ್ಟೇ, ಅದನ್ನು ಸರಿಪಡಿಸಲಾಗುವುದು ಎಂದರು.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ನಿಂದ ನಮ್ಮ ಶಾಸಕರ ಬೆಂಬಲವಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರಲ್ಲ? ಎಂಬ ಪ್ರಶ್ನೆಗೆ,
ತೀಕ್ಷ್ಣವಾಗಿ ಉತ್ತರಿಸಿದ ಕಾರಜೋಳ, ಅವರಿಬ್ಬರದು ಎಣ್ಣೆ- ಸೀಗೆಕಾಯಿ ಸಂಬಂಧ. ಅದರ ಬಗ್ಗೆ ನಾನು ಹೆಚ್ಚು ಚರ್ಚಿಸಲಾರೆ ಎಂದರು.
ತಾಲ್ಲೂಕಿನ ಹೊಳಗುಂದಿ ಗ್ರಾಮದ ರೈತರ ಹೊಲಗಳು ಸೇರಿದಂತೆ ಇನ್ನಿತರೆಡೆ ಸಂಚರಿಸಿದ ತಂಡ ನಂತರ ಹಗರಿಬೊಮ್ಮನ ಹಳ್ಳಿಗೆ ತೆರಳಿತು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೃಷ್ಣನಾಯಕ, ಶಾಸಕ ಮಹೇಶ್ ತೆಂಗಿನಕಾಯಿ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮುಖಂಡರಾದ ಎಂ. ಪರಮೇಶ್ವರಪ್ಪ, ಹೆಚ್. ಪೂಜಪ್ಪ. ಎಸ್. ಸಂಜೀವ ರೆಡ್ಡಿ, ಬಿ. ತೋಟ ನಾಯಕ, ಈಟಿ ಲಿಂಗರಾಜ್ ಮೊದಲಾದವರು ಪಾಲ್ಗೊಂಡಿದ್ದರು.