ಹೊನ್ನಾಳಿ : ಸರ್ಕಾರಿ ಯೋಜನೆಗಳ ಸೌಲಭ್ಯಕ್ಕೆ ರೈತರಿಗೆ ‘ಫ್ರೂಟ್ಸ್’ ನೋಂದಣಿ ಕಡ್ಡಾಯ

ಹೊನ್ನಾಳಿ, ನ.8- ಅವಳಿ ತಾಲ್ಲೂಕುಗಳನ್ನು ತೀವ್ರ ಬರಪೀಡಿತ  ಎಂದು ಸರ್ಕಾರ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ, ತಾಲ್ಲೂಕಿನ ರೈತರು ಬೆಳೆ ಪರಿಹಾರ, ಬೆಳೆ ವಿಮೆ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ರೈತರ ನೋಂದಣಿ ಸಂಖ್ಯೆ   (ಫಾರ್ಮರ್‌ ಐಡೆಂಟಿಫಿಕೇಷನ್ ನಂಬರ್)  ಮಾಡಿಸುವುದು ಕಡ್ಡಾಯವಾಗಿರುತ್ತದೆ.  ಈಗಾಗಲೇ ಎಫ್.ಐ.ಡಿ  ಮಾಡಿಸಿರುವ ರೈತರು ತಮ್ಮ ಎಲ್ಲಾ ಸರ್ವೆ ನಂಬರ್‌ಗಳನ್ನು ಎಫ್.ಐ.ಡಿ ಗೆ ಜೋಡಣೆ ಮಾಡಿಸಬೇಕಾಗಿರುತ್ತದೆ. 

ಆದುದರಿಂದ ಈವರೆಗೆ ಎಫ್.ಐ.ಡಿ ಯಲ್ಲಿ ಜಮೀನಿನ ವಿವರಗಳನ್ನು ಜೋಡಣೆ ಮಾಡದೇ ಇರುವ ರೈತರು 2023-24 ನೇ ಸಾಲಿನ ಬರ ಪರಿಹಾರದ ಹಣವನ್ನು ಪಡೆಯಲು ಈ ಕೂಡಲೇ ತಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನಿನ ಸರ್ವೆ ನಂಬರ್‌ಗಳ ವಿವರಗಳೊಂದಿಗೆ ಕೃಷಿ/ಕಂದಾಯ/ತೋಟಗಾರಿಕೆ/ಪಶುಸಂಗೋಪನೆ/ರೇಷ್ಮೆ ಇಲಾಖೆಗೆ ಭೇಟಿ ನೀಡಿ ಎಫ್.ಐ.ಡಿ ಗಳಿಗೆ ಸರ್ವೇ ನಂಬರ್‌ಗಳನ್ನು ಸೇರ್ಪಡೆಗೊಳಿಸ ಬೇಕಾಗಿ ಈ ಮೂಲಕ ಕೋರಿದೆ.

ಹೊಸದಾಗಿ ಎಫ್.ಐ.ಡಿ ಮಾಡಿಸುವಂತಹ ರೈತರು ಪಹಣಿ, ಆಧಾರ್‍ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು), ಗಳೊಂದಿಗೆ ಕೃಷಿ, ಕಂದಾಯ, ತೋಟಗಾರಿಕೆ, ರೇಷ್ಮೆ, ಪಶುಸಂಗೋ ಪನೆ ಇಲಾಖೆ ಗಳಿಗೆ ಭೇಟಿ ನೀಡಿ ಕೂಡಲೇ ಎಫ್.ಐ.ಡಿ ಗಳನ್ನು ಮಾಡಿಸಬೇಕಾಗಿದೆ ಇಲ್ಲದಿದ್ದಲ್ಲಿ ಸರ್ಕಾರದಿಂದ ನೀಡುವ ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮೆಯಾಗುವುದಿಲ್ಲವೆಂದು   ಸಹಾಯಕ ಕೃಷಿ ನಿರ್ದೇಶಕಿ  ಕು. ಎ.ಎಸ್. ಪ್ರತಿಮಾ ತಿಳಿಸಿದ್ದಾರೆ. 

ಅಲ್ಲದೇ  ಯಾವುದೇ ಪಹಣಿಗಳು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಲು ಬಿಟ್ಟು   ಹೋಗದಂತೆ ನೋಡಿಕೊಳ್ಳುವಂತೆ ಅವರು ರೈತರಿಗೆ ಸೂಚಿಸಿದ್ದಾರೆ.

error: Content is protected !!