ಎಲೆಬೇತೂರು ಪ್ರೌಢಶಾಲೆಯಲ್ಲಿ ಸಂಭ್ರಮದ ರಾಜ್ಯೋತ್ಸವ

ಎಲೆಬೇತೂರು ಪ್ರೌಢಶಾಲೆಯಲ್ಲಿ ಸಂಭ್ರಮದ ರಾಜ್ಯೋತ್ಸವ

ದಾವಣಗೆರೆ,  ನ. 8 – ಎಲೆಬೇತೂರು ಗ್ರಾಮದ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಹಾಗೂ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ನರ್ಸರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ‘50ನೇ ವರ್ಷದ ಕರ್ನಾಟಕ ಸುವರ್ಣ ಸಂಭ್ರಮ’ ಹಾಗೂ ‘68ನೇ ಕನ್ನಡ ರಾಜ್ಯೋತ್ಸವ’ ಕಾರ್ಯಕ್ರಮವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ತಳಿರು, ತೋರಣ ಹಾಗೂ ಕನ್ನಡ ಧ್ವಜಗಳಿಂದ ಅಲಂಕರಿಸಿದ ಶಾಲಾ ಆವರಣದಲ್ಲಿ ಆರಂಭದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಾಡಗೀತೆ ಹಾಡಲಾಯಿತು. ನಂತರ ಗೀತ ಗಾಯನದ ಪ್ರಯುಕ್ತ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ‘ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’, ‘ಒಂದೇ ಒಂದೇ ಒಂದೇ ಕರ್ನಾಟಕ ಒಂದೇ’, ‘ಹೊತ್ತಿತೋ ಹೊತ್ತಿತೋ ಕನ್ನಡದ ದೀಪ’, ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಕನ್ನಡ ಗೀತೆಗಳನ್ನು ಸಾಮೂಹಿಕವಾಗಿ ಹಾಡಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಮುಖ್ಯಸ್ಥ ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ ತಾಲ್ಲೂಕು ಕಸಾಪ ನಿರ್ದೇಶಕ ಎಂ. ಷಡಕ್ಷರಪ್ಪ ಬೇತೂರು, ಶ್ರೀ ತರಳಬಾಳು ಆಂಗ್ಲ ಮಾಧ್ಯಮ ನರ್ಸರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆಯ ಅಧ್ಯಕ್ಷ ಎಚ್. ಬಸವರಾಜಪ್ಪ, ಎ.ಕೆ. ಫೌಂಡೇಶನ್ ಮುಖ್ಯಸ್ಥರು ಹಾಗೂ ದಾನಿಗಳಾದ ಕೆ.ಬಿ. ಕೊಟ್ರೇಶ್, ಪ್ರೌಢಶಾಲೆಯ ಕನ್ನಡ ಅಧ್ಯಾಪಕರಾದ ಎಸ್.ಆರ್. ನಾಗರಾಜ್, ಕನ್ನಡ ನಾಡು-ನುಡಿ-ಸಂಸ್ಕೃತಿ ಹಾಗೂ ಕನ್ನಡ ನಾಡಿನ ಇತಿಹಾಸ, ಹಿರಿಮೆ-ಗರಿಮೆಯ ಕುರಿತು ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ. ಬಸವರಾಜಪ್ಪ ಅವರು, ಕನ್ನಡ ಉಳಿಸಿ-ಬೆಳೆಸಿಕೊಂಡು ಹೋಗುವುದು ಹಾಗೂ ಕನ್ನಡ ನೆಲ-ಜಲ ಸಂರಕ್ಷಣೆ ಕನ್ನಡಿಗರ ಆದ್ಯ ಕರ್ತವ್ಯ ಎಂದು ಹೇಳಿದರು.

ವೇದಿಕೆಯಲ್ಲಿ ಸ್ಥಳೀಯ ಸಲಹಾ ಸಮಿತಿಯ ಸದಸ್ಯರಾದ ಕಾರ್ಯದರ್ಶಿ ಬಿ.ವಿರುಪಾಕ್ಷಪ್ಪ,  ಹೆಚ್. ರಾಜಪ್ಪ, ಎಂ. ಕೊಟ್ರೇಶ್, ಅಧ್ಯಾಪಕರಾದ ಎಚ್.ಎಸ್. ದ್ಯಾಮೇಶ್, ಎಸ್.ಓ. ಷಣ್ಮುಖಪ್ಪ, ಶ್ರೀಮತಿ ಅನಿತಾ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಕುರಿತು ಮಾತನಾಡಿದರು. ನಂತರ ‘ಹಚ್ಚೇವು ಕನ್ನಡದ ದೀಪ’ ಮತ್ತು ‘ಕನ್ನಡ ನಾಡಿನ ಮುದ್ದು ಮಕ್ಕಳೇ’ ಎನ್ನುವ ಗೀತೆಗಳಿಗೆ ಆಕರ್ಷಕ ನೃತ್ಯರೂಪಕ ನೀಡಿದರು. ವಿದ್ಯಾರ್ಥಿಗಳು ಕಿತ್ತೂರಾಣಿ ಚೆನ್ನಮ್ಮ, ರಾಷ್ಟ್ರಕವಿ ಕುವೆಂಪು, ಪುರಂದರ ದಾಸರು, ತಾಯಿ ಭುವನೇಶ್ವರಿಯ ವೇಷಭೂಷಣಗಳನ್ನು ಧರಿಸಿದ್ದು ಎಲ್ಲರ ಗಮನ ಸೆಳೆಯಿತು. 

ವಿದ್ಯಾರ್ಥಿನಿ ಸಿಂಚನ ಮತ್ತು ಸಂಗಡಿಗರು ‘ಬಾರಿಸು ಕನ್ನಡ ಡಿಂಡಿಮವ’ ಹಾಗೂ ವಿದ್ಯಾರ್ಥಿ ಯಶವಂತ ‘ಕರುನಾಡ ತಾಯಿ ಸದಾ ಚಿನ್ಮಯಿ’ ಎನ್ನುವ ಹಾಡುಗಳನ್ನು ಹಾಡಿ ದರು. ಮುಖ್ಯೋಪಾಧ್ಯಾಯಿನಿ ಎಂ.ಬಿ. ಪ್ರೇಮ ಸ್ವಾಗತ, ಮುಖ್ಯೋಪಾಧ್ಯಾಯಿನಿ ಬಿ.ಎಂ. ಶಶಿಕಲ ನಿರೂಪಣೆ ಹಾಗೂ ಶಿಕ್ಷಕಿ ಸುನಿತಾ ಜಿ.ಆರ್. ವಂದನಾರ್ಪಣೆ ಮಾಡಿದರು.

error: Content is protected !!