ಕೆರೆಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು

ಕೆರೆಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು

ಹರಪನಹಳ್ಳಿ ಪೊಲೀಸ್‌ ವೃತ್ತ ನಿರೀಕ್ಷಕ ನಾಗರಾಜ ಎಂ. ಕಮ್ಮಾರ

ಹರಪನಹಳ್ಳಿ, ನ. 6 – ನಮ್ಮ ಕೆರೆ, ನಮ್ಮ ಹಕ್ಕಾಗಿದ್ದು, ಕೆರೆಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಪೊಲೀಸ್‌ ವೃತ್ತ ನಿರೀಕ್ಷಕ ನಾಗರಾಜ ಎಂ. ಕಮ್ಮಾರ ಹೇಳಿದರು. 

ಅವರು ಪುರಸಭೆಯವರು ಕೈಗೊಂಡ ಪಟ್ಟಣದ ಕಾಯಕದಹಳ್ಳಿ ರಸ್ತೆಯಲ್ಲಿರುವ ನಾಯಕನ ಕೆರೆ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು. 

ಕೆರೆ ಎಂದಾಗ ಅದು ಇಡೀ ಪಟ್ಟಣದ ಆಸ್ತಿಯಾಗಿರುತ್ತದೆ, ಇದನ್ನು ಹಾಳು ಮಾಡುವ ಅಧಿಕಾರ ಯಾರಿಗೂ ಇರುವುದಿಲ್ಲ. ಪೂರ್ವಜರು ಕೆರೆಗಳನ್ನು ನಿರ್ಮಿಸಿರುವುದರ ಹಿಂದೆ ವೈಜ್ಞಾನಿಕ ಅಂಶ ವಿರುತ್ತದೆ,
ಅಂತರ್ ಜಲ ವೃದ್ದಿಸುವುದರ ಜೊತೆಗೆ ನೀರಿನ ಸಮಸ್ಯೆ ನೀಗಿಸುತ್ತವೆ, ಮುಂದಿನ ಪೀಳಿಗೆಗೆ ಕೆರೆಗಳ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ ಎಂದರು. 

ಕೆರೆಗಳ ಬಳಿ ದಂಡೆ ಮೇಲೆ ತ್ಯಾಜ್ಯ ತಂದು ಹಾಕಬಾರದು, ಬೇಡವಾದ ವಸ್ತು ಗಳನ್ನು ಕೆರೆಗಳಲ್ಲಿ ಎಸೆಯುವುದನ್ನು ಯಾರೂ ಮಾಡಬಾರದು.  ಕೆರೆ, ಹಳ್ಳ ಕೊಳ್ಳಗಳನ್ನು ನಿರ್ಲಕ್ಷಿಸಿದರೆ ಅದರ ಪರಿಣಾಮವನ್ನು ಪ್ರತಿಯೊಬ್ಬರೂ ಎದುರಿಸಬೇಕಾಗುತ್ತದೆ. ಕೆರೆಗಳನ್ನು ಸ್ವಚ್ಚಗೊಳಿಸುವ ಕಾರ್ಯ ಆಗಿಂದ್ದಾಗ್ಗೆ ಆಗಬೇಕು ಎಂದು ತಿಳಿಸಿದರು. 

ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಮಾತನಾಡಿ, ಕೆರೆಗಳು ಜನರ ಜೀವನಾಡಿಗಳು, ಕೆರೆಗಳನ್ನು ಮಲಿನಗೊಳಿಸ ಬಾರದು. ಸತ್ತ ಪ್ರಾಣಿಗಳನ್ನು ತಂದು ಹಾಕುವುದನ್ನು ಯಾರೂ ಮಾಡಬಾರದು, ಮದ್ಯದ ಬಾಟಲಿಗಳನ್ನು ಎಸೆಯುವುದು  ಒಟ್ಟಿನಲ್ಲಿ ತ್ಯಾಜ್ಯಗಳನ್ನು ಹಾಕಿ ಕೆರೆಗಳನ್ನು ಹಾಳು ಮಾಡಬಾರದು ಎಂದು ತಿಳಿಸಿದರು.

ನೀರಿನ ಮಹತ್ವ, ಜಲ ಸಂರಕ್ಷಣೆ ಹಾಗೂ ಪರಿಸರ ಕಾಪಾಡುವ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮುಂದೆಯೂ ಇಂತಹ ಸ್ವಚ್ಚತಾ ಅಭಿಯಾನ ನಡೆಯುತ್ತವೆ. ಅದಕ್ಕೆ ಸಾರ್ವಜನಿಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದು ಅವರು ಹೇಳಿದರು. 

ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್‌ ಮಾತನಾಡಿ, ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳ ಮನುಷ್ಯನ ಅವಿಭಾಜ್ಯ ಅಂಗಗಳು, ಕೆರೆಗಳು ಹಳ್ಳಿಯ ಆರ್ಥಿಕ ಮತ್ತು ಸಾಮಾಜಿಕ ಕೇಂದ್ರ ಬಿಂದುವಾಗಿ ಹಳ್ಳಿಯ ಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಕೃಷಿಗಾಗಿ ನೀರಾವರಿ ಸೌಲಭ್ಯ ಒದಗಿಸುವಲ್ಲಿ ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ. ಆದ್ದರಿಂದ ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಯಾಗಿದೆ ಎಂದು ತಿಳಿಸಿದರು. 

ನೌಕರರ ಸಂಘ, ಶಿಕ್ಷಕರ ಸಂಘ, ವೈದ್ಯಕೀಯ ಸಂಘ, ಪ್ರಕೃತಿ ಪಂಥ, ಜೀವ ಜಲ ಟ್ರಸ್ಟ್‌, ಜೀವ ವಿಮಾ ಪ್ರತಿ ನಿಧಿಗಳ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸ್ವಚ್ಚತಾ ಅಭಿಯಾನ ಕೈಗೊಂಡರು. 

ಸ್ತ್ರೀ ರೋಗ ತಜ್ಞ ಡಾ. ಮಹೇಶ್, ಶಿಕ್ಷಕರ ಸಂಘದ ಕಾರ್ಯದರ್ಶಿ ಷರೀಫ, ಮನ್ಸೂರ್‌ ಅಹ್ಮದ್‌, ಬಿ. ರಾಜಶೇಖರ್, ಚಂದ್ರಮೌಳಿ, ಸುಬ್ಬಣ್ಣ, ಪರಶುರಾಮ, ಜೀವಜಲ ಟ್ರಸ್ಟ್‌ನ ಹೇಮಣ್ಣ ಮೋರಗೇರಿ, ರವೀಂದ್ರ ಅಧಿಕಾರ, ಪ್ರಾಚಾರ್ಯ ಎಚ್. ಮಲ್ಲಿಕಾರ್ಜುನ, ಡಾ. ಸಂಗೀತ ಭಾಗವತ್‌, ಕಿಷನ್‌ ಭಾಗವತ್‌, ಸಿದ್ದಪ್ಪ ಹರಿಂದ್ರಾಳ್‌, ಉಪನ್ಯಾಸಕ ಕೃಷ್ಣಮೂರ್ತಿ, ಬಿಸಿಎಂ ಇಲಾಖೆಯ ಬಿ.ಎಚ್‌.ಚಂದ್ರಪ್ಪ, ಪುರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ ಸೇರಿದಂತೆ ಅನೇಕರು ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. 

error: Content is protected !!