ಹೊನ್ನಾಳಿಯಲ್ಲಿ ಬರ ಅಧ್ಯಯನ ತಂಡದೊಂದಿಗೆ ವಿಧಾನಸಭಾ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ
ಹೊನ್ನಾಳಿ-ನ್ಯಾಮತಿ, ನ.6- ರಾಜ್ಯದ 220 ತಾಲ್ಲೂಕುಗಳಲ್ಲಿ ಭೀಕರ ಬರಗಾಲದಿಂದ ರೈತ ಸಮುದಾಯ ತತ್ತರಿಸಿ ಹೋಗಿದ್ದು, ಕಾಂಗ್ರೆಸ್ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡದೇ ಅಧಿಕಾರದ ಹಗ್ಗಜಗ್ಗಾಟದಲ್ಲಿ ಮುಳುಗಿ ಹೋಗಿದೆ ಎಂದು ವಿಧಾನಸಭಾ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ರೈತರ ಜಮೀನುಗಳಿಗೆ ಬರ ಅಧ್ಯಯನ ತಂಡದೊಂದಿಗೆ ಭೇಟಿ ನೀಡಿ ಹಾನಿಯಾದ ಮೆಕ್ಕೆಜೋಳದ ಬೆಳೆಯನ್ನು ವೀಕ್ಷಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹಿಂದೆಂದೂ ಕಾಣದ ಬರಗಾಲದ ಭೀಕರತೆಗೆ ರೈತ ಸಮುದಾಯ ನಲುಗಿ ಹೋಗಿದೆ. ಸಕಾಲದಲ್ಲಿ ಮಳೆಯಾಗದೇ ರೈತರು ಬೆಳೆದ ಫಸಲು ಒಣಗಿ ಹೋಗಿದೆ, ಮಳೆಯಾಗದೇ ಯಾವ ಬೆಳೆಯೂ ಕೈಸೇರದೇ ರೈತರು ತೀವ್ರ ಆತಂಕದಲ್ಲಿದ್ದು, ಬೆಳೆ ಹಾನಿಯಿಂದ ಸಾಲದ ಶೂಲಕ್ಕೆ ಹೆದರಿ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ರೈತ ಸಮುದಾಯದ ಸಂಕಷ್ಟಕ್ಕೆ ನೆರವಾಗದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ 17 ತಂಡಗಳನ್ನು ರಚಿಸಿ, ರಾಜ್ಯದೆಲ್ಲೆಡೆ ಸಂಚರಿಸಿ ಬರ ಅಧ್ಯಯನ ನಡೆಸಿ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರಿ ರೈತರಿಗೆ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ಬಿಜೆಪಿ ಪಕ್ಷವು ತಂಡಗಳನ್ನು ರಚಿಸಿ, ಬರ ಅಧ್ಯಯನ ಮಾಡಲು ಮುಂದಾಗುತ್ತಿದ್ದಂತೆಯೇ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾ ಉಸ್ತುವಾರಿ ಸಚಿವರಿಗೆ 1 ವಾರದೊಳಗೆ ಬರ ಅಧ್ಯಯನ ನಡೆಸಿ, ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದಿಂದ ಕಾವೇರಿ ವಿಚಾರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಇಂತಹ ವಿಷಮ ಪರಿಸ್ಥಿತಿಯಲ್ಲೂ ಕಾವೇರಿ ನೀರು ತಮಿಳುನಾಡಿಗೆ ಹರಿಯುವಂತಾಗಿದೆ. ರಾಜ್ಯದಲ್ಲಿ ಕುಡಿಯುವ ನೀರಿಗೆ ತತ್ವಾರ, ಕಾನೂನು ಶಾಂತಿ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸರ್ಮಪಕ ವಿದ್ಯುತ್ ವಿತರಣೆಯಾಗುತ್ತಿಲ್ಲ. ಜಾನುವಾರುಗಳಿಗೆ ಮೇವಿಲ್ಲದೇ ಹಾಲಿನ ಡೈರಿಗಳಲ್ಲಿ ಹಾಲಿನ ಪ್ರಮಾಣ ಕಡಿಮೆಯಾಗಿದೆ. ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ರೇಣುಕಾಚಾರ್ಯ ವಿವಾದಗಳಿಂದ ನಾಯಕ: ಬರ ಅಧ್ಯಯನ ತಂಡದಿಂದ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಹೆಸರನ್ನು ಕೈ ಬಿಟ್ಟಿದ್ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ರೇಣುಕಾಚಾರ್ಯ ಅವರು ಪಕ್ಷದ ಚೌಕಟ್ಟಿನಲ್ಲಿರದೇ ವಿವಾದಗಳನ್ನು ಸೃಷ್ಟಿಸಿ ನಾಯಕನಾಗಲು ಹೊರಟಿರುವ ಅವರು ತಮ್ಮನ್ನು ಪಕ್ಷದವರು ಕರೆಯುವ ಹಾಗೆ ವ್ಯಕ್ತಿತ್ವವನ್ನು ಮೊದಲು ಬೆಳಿಸಿಕೊಳ್ಳುವುದನ್ನು ಕಲಿಯಬೇಕು ಎಂದು ಮಾರ್ಮಿಕವಾಗಿ ನುಡಿದರು.
ರೈತನ ಅಳಲು: ಮಾದನಭಾವಿಯ ರೈತ ಓಂಕಾರಪ್ಪ ಅವರು ಸಂಸದ ಜಿ.ಎಂ.ಸಿದ್ದೇಶ್ ಮತ್ತು ಬರ ಅಧ್ಯಯನ ತಂಡದವರಲ್ಲಿ ಸ್ವಾಮಿ ನಾವು ಬೆಳೆದ ಬೆಳೆ ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು ಜೀವನ ಮಾಡುವುದೇ ಕಷ್ಟ ಸಾಧ್ಯವಾಗಿದ್ದು ನೀವುಗಳು ಮನಸ್ಸು ಮಾಡಿದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ನಮ್ಮ ಹಾನಿಯಾದ ಬೆಳೆಗೆ ಸಮರ್ಪಕ ಪರಿಹಾರ ಕೊಡಿಸಲು ಸಾಧ್ಯವೆಂದು ಪರಿಪರಿಯಾಗಿ ಬೇಡಿಕೊಂಡ ದೃಶ್ಯ ಮನ ಕಲಕುವಂತಿತ್ತು.
ದಾನಿಹಳ್ಳಿ ಮೃತ ರೈತನ ಕುಟುಂಬಕ್ಕೆ ಸಾಂತ್ವಾನ : ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಮೃತ ನಾಗರಾಜ್ ಕುಟುಂಬಕ್ಕೆ ಬರ ಅಧ್ಯಯನ ತಂಡವು ಭೇಟಿ ನೀಡಿ ಸಾಂತ್ವಾನ ಹೇಳಿತು. ಈ ಸಂದರ್ಭದಲ್ಲಿ ಮೃತ ರೈತನ ಮರಣ ಪ್ರಮಾಣ ಪತ್ರದಲ್ಲಿ ಲೋಪ-ದೋಷವಾಗಿದ್ದನ್ನು ಶಿವಮೊಗ್ಗದ ಜಿಲ್ಲಾ ಆರೋಗ್ಯಾಧಿಕಾರಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು ದೂರವಾಣಿ ಮುಖಾಂತರ ಸಂಪರ್ಕಿಸಿ ದಾಖಲೆಗಳನ್ನು ಸರಿಮಾಡಿಕೊಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರಪ್ಪ, ಪ್ರೊ.ಲಿಂಗಣ್ಣ, ಮಾಜಿ ಮುಖ್ಯ ಸಜೇತಕ ಶಿವಯೋಗಿಸ್ವಾಮಿ, ದುಂಡಪ್ಪ, ವೀರೇಶ್ ಹನಗವಾಡಿ, ತಾಲ್ಲೂಕು ಉಸ್ತುವಾರಿ ಶಾಂತರಾಜ್ ಪಾಟೀಲ್, ಅಸಂಘಟಿತ ಪ್ರಕೋಷ್ಠದ ರಾಜ್ಯ ಸಂಚಾಲಕ ಎ.ಬಿ.ಹನುಮಂತಪ್ಪ, ಮೆಸ್ಕಾಂ ಮಾಜಿ ನಿರ್ದೇಶಕ ಎಸ್.ರುದ್ರೇಶ್, ಮುಖಂ ಡರಾದ ಸಿ.ಕೆ.ರವಿಕುಮಾರ್, ಎಂ.ಆರ್.ಮಹೇಶ್, ಎ.ಜಿ.ಮಹೇಂದ್ರಗೌಡ, ಎಂ.ಯು.ನಟರಾಜ್, ಯಕ್ಕನಹಳ್ಳಿ ಜಗದೀಶ್, ನೆಲಹೊನ್ನೆ ದೇವರಾಜ್, ಅಜಯ್‍ರೆಡ್ಡಿ, ಕೆ.ವಿ.ಚನ್ನಪ್ಪ, ಕಡೂರಪ್ಪ, ರೈತ ಮುಖಂಡರಾದ ಬೆಳಗುತ್ತಿ ಉಮೇಶ್, ಕೆ.ಸಿ.ಬಸಪ್ಪ, ಪ್ರವೀಣ್, ಶಾಂತರಾಜ್ ಮತ್ತಿತರರು ಉಪಸ್ಥಿತರಿದ್ದರು.