ಸಿರಿಗೆರೆಯಲ್ಲಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಕರೆ
ಸಿರಿಗೆರೆ, ನ. 6- ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠವು ಕನ್ನಡ ಭಾಷೆಗೆ ತುಡಿಯುವ ಮಠವಾಗಿರುವುದರಿಂದ, ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಪ್ರತಿ ವರ್ಷವೂ ನಾಡಹಬ್ಬವಾಗಿ ಜರುಗಲಿದೆ ಎಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹೇಳಿದರು.
ಇಲ್ಲಿನ ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ವಿದ್ಯಾರ್ಥಿ ನಿಲಯದ ಒಳಾಂಗಣದ ವೇದಿಕೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಅನ್ನ ದಾಸೋಹ ಹಾಗೂ ಜ್ಞಾನ ದಾಸೋಹವನ್ನು ಉಣಬಡಿಸುತ್ತಿರುವ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠವು ರಾಜ್ಯೋತ್ಸವವನ್ನು ಇಷ್ಟು ವಿಜೃಂಭಣೆಯಿಂದ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಪಾಶ್ಚಾತ್ಯ ಭಾಷೆಗಳಿಂದ ಕನ್ನಡದ ಮೇಲೆ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಕನ್ನಡ ಭಾಷೆಯ ಸೊಬಗನ್ನು ಸವಿಯುವ ನಾವೆಲ್ಲರೂ ಒಟ್ಟಾಗಿ ಹೋರಾಡ ಬೇಕಾಗಿದೆ. ಬೆಂಗಳೂರಿನ ಕಮೀಷನರ್ ಆಗಿದ್ದ ಕಬ್ಬನ್ ಅವರು ಪೂರ್ಣ ಕನ್ನಡದಲ್ಲಿ ಆಡಳಿತ ಮಾಡಿದ್ದರ ಫಲವಾಗಿ ಅವರ ಹೆಸರಿನಲ್ಲಿ ಕಬ್ಬನ್ ಪಾರ್ಕ್ ಎಂದು ನಾಮಕರಣ ಮಾಡಲಾಗಿದೆ. ಸರ್ ವಿಶ್ವೇಶ್ವರಯ್ಯನವರೂ ಸಹ ಕನ್ನಡ ಸಾಹಿತ್ಯ ಪರಿಷತ್ ಬೆಳೆಯಲು ಸಹಕರಿಸಿದವರಲ್ಲಿ ಪ್ರಮುಖರು ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾತೃ ಭಾಷೆ ಕನ್ನಡವನ್ನು ಆಂಗ್ಲ ಭಾಷೆಯ ಜೊತೆಗೆ ಕಲಬೆರಕೆ ಮಾಡದೇ ಶುದ್ಧ ಕನ್ನಡ ಮಾತನಾಡುವಲ್ಲಿ ನಿಮ್ಮೆಲ್ಲರ ಹೊಣೆಗಾರಿಕೆ ಇರಲಿ. ಬೆಂಗಳೂರು, ಮೈಸೂರು, ಮಂಗ ಳೂರು, ಧಾರವಾಡ, ದಾವಣಗೆರೆ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವ ಪ್ರೊಫೆಸರ್ಗಳು ಗಡಿನಾಡಿನ ಆಚೆಗೂ ಕನ್ನಡ ಪಸರಿಸಬೇಕು. ವಿದೇಶದ ವಿಶ್ವವಿದ್ಯಾನಿಲ ಯಗಳ ಜೊತೆಗೆ ಶಿಕ್ಷಣ ಪಡೆಯುವ ವಿನಿಮಯ ಯೋಜನೆಗೆ ಸರ್ಕಾರದ ವತಿಯಿಂದ 5 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದ ಸಂದರ್ಭವನ್ನು ನೆನಪಿಸಿದರು. ಅಧ್ಯಕ್ಷರಾದ ಮಹೇಶ್ ಜೋಶಿ ಅವರು ಈ ಯೋಜನೆಯನ್ನು ಪುನರ್ ಸ್ಥಾಪಿಸಿ ವಿದೇಶದಲ್ಲಿಯೂ ಕನ್ನಡದ ಕಂಪು ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆ ಕ.ಸಾ.ಪ ಅಧ್ಯಕ್ಷ ಸುರಿ ಶ್ರೀನಿವಾಸ್ ಮಾತನಾಡಿ, ಕನ್ನಡ ನಾಡಹಬ್ಬ ನಿರಂತರವಾಗಿ ಶ್ರೀಮಠದಲ್ಲಿ ನಡೆಯಲಿ. ಕನ್ನಡ ಮಾಧ್ಯಮದಲ್ಲಿ ಓದುವವರಿಗೆ ಎಲ್ಲಾ ಸೌಲಭ್ಯಗಳು ಸಿಗಲಿ. ಸಿರಿಗೆರೆಯ ಸಂಸ್ಕಾರ ವಿದ್ಯಾರ್ಥಿಗಳಲ್ಲಿ ಕನ್ನಡ ಶಕ್ತಿಯನ್ನು ತುಂಬುತ್ತದೆ. ಕಲೆ, ಸಾಹಿತ್ಯ, ಸಂಗೀತ, ಶೈಕ್ಷಣಿಕವಾಗಿ ಶ್ರೀಮಠದ ಕೊಡುಗೆ ಅಪಾರ. ಕನ್ನಡ ಶಾಲೆಗಳು ಉಳಿಯುವುದಕ್ಕೆ ಶ್ರೀಮಠವೂ ಸಹಕರಿಸುತ್ತಿದೆ ಎಂದರು.
ದಾವಣಗೆರೆ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಬಿ.ವಾಮದೇವಪ್ಪ, ಚಿತ್ರದುರ್ಗ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮತ್ತಿತರ ರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು,
ಮೈಸೂರಿನ ಡಾ. ಶ್ವೇತ ಮಡಪ್ಪಾಡಿ ತಂಡ ಸುಮಧುರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ನೌಕರರಿಗಾಗಿ ನಡೆದ ರಸಪ್ರಶ್ನೆ ಕಾರ್ಯಕ್ರಮವನ್ನು ಶ್ರೀ ಗುರುಶಾಂತೇಶ್ವರ ಭವನದಲ್ಲಿ ಸಹಶಿಕ್ಷಕ ಎಂ.ರಂಗಣ್ಣ ತಂತ್ರಜ್ಞಾನದ ಸಹಾಯದಿಂದ ಬಿತ್ತರಿಸಿದರು. ಕೆ.ಇ.ಬಸವರಾಜು, ನಾಗರಾಜು ಸಿರಿಗೆರೆ ಹಾಗೂ ಎಸ್.ಆರ್.ಮಲ್ಲಿಕಾರ್ಜುನ್ ಅವರು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಡಾ. ಹೆಚ್.ಓಂಕಾರನಾಯ್ಕ ಮತ್ತು ಸವಿತಾ ಪಾಟೀಲ (ಪ್ರಥಮ), ಸಿ.ಎಸ್.ಬಸವರಾಜಪ್ಪ ಮತ್ತು ಜಿ.ಎಚ್.ಆಶಾ (ದ್ವಿತೀಯ) ಹಾಗೂ ಎಂ.ಎಂ.ಭಾಸ್ಕರಾಚಾರ್ಯ ಮತ್ತು ಶಿವಾನಂದ ಬಣಕಾರ (ತೃತೀಯ ಸ್ಥಾನ) ಪಡೆದರು.