ಬೆಳೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರು ಬಿಡಲು ಆಗ್ರಹ

ಬೆಳೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರು ಬಿಡಲು ಆಗ್ರಹ

ನಾಳೆ ಹರಿಹರ ತಾಲ್ಲೂಕಿನ ರೈತರನ್ನು ಒಗ್ಗೂಡಿಸಿಕೊಂಡು, ಸಚಿವ ಎಸ್ಸೆಸ್ಸಂ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ.

– ನಂದಿಗಾವಿ ಶ್ರೀನಿವಾಸ್‌, ಕಾಂಗ್ರೆಸ್ ಮುಖಂಡ

ಹರಿಹರ, ನ. 5-  ಮಳೆಯ ಕೊರತೆಯಿಂದ ಬೆಳೆದಿರುವ ಭತ್ತ, ಮೆಕ್ಕೆಜೋಳದ ಬೆಳೆಗಳು ಸಂಪೂರ್ಣವಾಗಿ ಹಾಳಾಗುವ ಹಂತದಲ್ಲಿರುವುದರಿಂದ, ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರು ಬಿಡುವಂತೆ ಆಗ್ರಹಿಸಿ, ತಾಲ್ಲೂಕಿನ ರೈತರ ಸಮ್ಮುಖದಲ್ಲಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮನವಿ ಸಲ್ಲಿಸ ಲಾಗುವುದು ಎಂದು ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಈಗಾಗಲೇ ಹಲವಾರು ಬಾರಿ ನಡೆದಿರುವ ಸಭೆಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಸಮರ್ಪಕವಾಗಿ ನೀರು ಬಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪನವರು ಬಹಳಷ್ಟು ಒತ್ತಡ ಹಾಕಿಕೊಂಡು ಬಂದಿದ್ದು, ಆದರೆ ಅವರ ಮಾತಿಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದಿಸದೇ ಇರುವುದರಿಂದ, ಈ ಸಮಸ್ಯೆಗಳು ಇಲ್ಲೇ ಪರಿಹಾರ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಕಾರಣ ದಿನಾಂಕ 7ರ ಮಂಗಳವಾರ ಬೆಳಿಗ್ಗೆ ತಾಲ್ಲೂಕಿನ ಎಲ್ಲಾ ರೈತರನ್ನು ಒಗ್ಗೂಡಿಸಿಕೊಂಡು ಬೆಂಗಳೂರಿಗೆ ತೆರಳಿ, ಫ್ರೀಡಂ ಪಾರ್ಕಿನಿಂದ ಹೊರಟು ಸಿ.ಎಂ. ಡಿ.ಸಿ.ಎಂ ರವರಿಗೆ ಮನವಿಯನ್ನು ಸಲ್ಲಿಸಲಾಗುತ್ತದೆ. ಆದ್ದರಿಂದ ರೈತರಿಗೆ 4 ಬಸ್ ವ್ಯವಸ್ಥೆ ಕೂಡ ಮಾಡಿದ್ದು, ತಾಲ್ಲೂಕಿನ ರೈತರು ಪಕ್ಷತೀತವಾಗಿ ಪಾಲ್ಗೊಳುವಂತೆ ಅವರು ಹೇಳಿದರು. 

ಜಿಪಂ ಮಾಜಿ ಸದಸ್ಯ ಕುಂಬಳೂರು ವಿರುಪಾಕ್ಷಪ್ಪ ಮಾತನಾಡಿ, ಈಗಾಗಲೇ ರಾಜ್ಯ ಸರ್ಕಾರ ದಿನಾಂಕ 16 ರಿಂದ ನೀರು ಬಿಡುವುದನ್ನು ಬಂದ್ ಮಾಡಬೇಕೆಂಬ ಉದ್ದೇಶವಿರೋದರಿಂದ ಸರ್ಕಾರ ಆ ರೀತಿಯ ತೀರ್ಮಾನ ಕೈಗೊಂಡರೆ, ಬೆಳೆದಿರುವ ಬೆಳೆಗಳು ಸಂಪೂರ್ಣವಾಗಿ ನಾಶ ಆಗುತ್ತವೆ. ಹಿಂದೆ ಎಸ್.ಎಸ್. ಮಲ್ಲಿಕಾರ್ಜುನ್ ಕ್ರೀಡಾ ಸಚಿವರಾಗಿದ್ದ ಸಮಯದಲ್ಲಿ ಡ್ಯಾಮ್ ನಲ್ಲಿ 145 ಅಡಿ ನೀರು ಇದ್ದರೂ ಸಹ ರೈತರಿಗೆ ತೊಂದರೆ ಆಗಬಾರದು ಎಂದು ನೀರು ಕೊಟ್ಟಿದ್ದಾರೆ. ಈಗ ಆ ರೀತಿಯಲ್ಲಿ ನೀರು ಹರಿಸಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಮತ್ತು ರೈತರಿಗೆ ಅನುಕೂಲ ಆಗುತ್ತದೆ ಎಂದು ಹೇಳಿದರು.

ತಾಪಂ ಮಾಜಿ ಅಧ್ಯಕ್ಷ ಭಾನುವಳ್ಳಿ ಕನ್ನಪ್ಪ ಮಾತನಾಡಿ,  ಈಗಾಗಲೇ ರೈತರು ಬೆಳೆದ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು, ನವೆಂಬರ್ 30 ರವರೆಗೆ ನೀರು ಕೊಡದೇ ಹೋದರೆ ರೈತರು ಬೆಳೆದ ಬೆಳೆಗಳಿಗೆ ಹಾನಿ ಸಂಭವಿಸಿ, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುವ ಹಂತಕ್ಕೆ ಹೋಗುತ್ತದೆ. ಹಾಗಾಗಿ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ತೋರದೆ ಸರಿಯಾದ ರೀತಿಯಲ್ಲಿ ನೀರು ಹರಿಸುವಂತೆ ಹೇಳಿದರು.

ಮಲ್ಲನಾಯಕನಹಳ್ಳಿ ಶೇಖರಪ್ಪ ಮಾತನಾಡಿ, ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಅವರ ಆಡಳಿತದ ಅವಧಿಯಲ್ಲಿ ಇಂತಹದ್ದೇ ಸಮಸ್ಯೆಗಳು ಬಂದಾಗ ಕೊನೆ ಭಾಗದ ರೈತರಿಗೆ ಅನುಕೂಲವಾಗಬೇಕು ಎನ್ನುವ ದೃಷ್ಟಿಯಿಂದ ಡ್ಯಾಮ್‌ನಲ್ಲಿ ನೀರು ಕಡಿಮೆ ಇದ್ದರೂ ಸಹ ಅದನ್ನು ಗಣನೆಗೆ ತೆಗೆದುಕೊಳ್ಳದೆ ರೈತರು ಬೆಳೆದ ಬೆಳೆಗಳಿಗೆ ನೀರನ್ನು ಸಮರ್ಪಕವಾಗಿ ನೀಡಲಾಗಿತ್ತು. ಈಗ ರೈತರು ಬೆಳೆದ ಬೆಳೆಗಳಿಗೆ 5 ರಿಂದ 6 ಅಡಿ ನೀರು, ಸರ್ಕಾರ ಸರಿಯಾದ ರೀತಿಯಲ್ಲಿ ನೀರು ಹರಿಸದಿದ್ದರೆ, ಆಹಾರದ ವ್ಯವಸ್ಥೆ ಹದಗೆಟ್ಟು ಧಾನ್ಯಗಳ ದರಗಳು ದುಪ್ಪಟ್ಟು ಆಗುತ್ತವೆ. ಈಗಾಗಲೇ ರಾಜ್ಯದ ಸಿ.ಎಂ. ಬೇರೆ ಅಣೆಕಟ್ಟು ಪ್ರದೇಶದ ರೈತರಿಗೆ ತೊಂದರೆ ಆಗದಂತೆ  ನೀರು ಸರಬರಾಜು ಮಾಡುವಂತೆ ಆದೇಶವನ್ನು ಮಾಡಿದ್ದು, ಅದರ ಅನ್ವಯ ದಾವಣಗೆರೆ ಮತ್ತು ಶಿವಮೊಗ್ಗ ಭಾಗದ ರೈತರಿಗೆ ನವೆಂಬರ್ 30 ರವರೆಗೆ ನೀರು ಸರಾಗವಾಗಿ ಕೊಡುವಂತೆ ಆದೇಶ ನೀಡಬೇಕು ಎಂದು ಹೇಳಿದರು.  

ಈ ಸಂದರ್ಭದಲ್ಲಿ  ಕಮಲಾಪುರ ಮಲ್ಲೇಶ್,  ಎಳೆಹೊಳೆ ಹನುಮಂತಪ್ಪ ಹಾಗು ಇತರರು ಹಾಜರಿದ್ದರು.

error: Content is protected !!