ವಚನಗಳ ಕಾಯಕ ತತ್ವ ಅನ್ವಯಿಸಿಕೊಳ್ಳಬೇಕಿದೆ

ವಚನಗಳ ಕಾಯಕ ತತ್ವ ಅನ್ವಯಿಸಿಕೊಳ್ಳಬೇಕಿದೆ

ಸಾಣೇಹಳ್ಳಿಯ ನಾಟಕೋತ್ಸವದ ವಿಚಾರ ಸಂಕಿರಣದಲ್ಲಿ ಲೇಖಕ ರಾಜೇಂದ್ರ ಚೆನ್ನಿ

ಸಾಣೇಹಳ್ಳಿ, ನ. 5- ವಚನಗಳಲ್ಲಿರುವ ಕಾಯಕ ತತ್ವಕ್ಕೆ ಇರುವ ತಾತ್ವಿಕ ಶಕ್ತಿ, ಸಾಂಸ್ಕೃತಿಕ ಶಕ್ತಿ, ರಾಜ ಕೀಯ ಶಕ್ತಿ, ಬದಲಾವಣೆ ತರುವ ಶಕ್ತಿಯನ್ನು ನಮ್ಮ ಇಂದಿನ ಕಾಲಕ್ಕೆ  ಅನ್ವಯಿಸಿಕೊಳ್ಳಬೇಕಿದೆ ಎಂದು ಲೇಖಕ, ಚಿಂತಕ ರಾಜೇಂದ್ರ ಚೆನ್ನಿ ಸಲಹೆ ನೀಡಿದರು.

ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಶನಿವಾರ ಇಲ್ಲಿ ಏರ್ಪಡಿಸಿದ್ದ ‘ಕಾಯಕ ಮತ್ತು ದಾಸೋಹ ತತ್ವಗಳ ಅಂತರ್ ಸಂಬಂಧ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ‘ಕಾಯಕ ತತ್ವ’ ಕುರಿತು ಮಾತನಾಡಿದರು. 

ಪ್ರತಿಭಟನೆಯ ಧ್ವನಿಗಳು ಹುಟ್ಟಿಕೊಂಡಿದ್ದು ಕಾಯಕದಿಂದ. ಸಮಾನತೆಯ ಚಲನೆ ಕಡೆಗೆ, ಅಸಮಾನತೆಯ ವಿರುದ್ಧ ಹೋರಾಟ, ಜಾತಿ ವಿನಾಶದ ಕಡೆಗೆ ದೊಡ್ಡ ಹೆಜ್ಜೆ. ಇಂಥವುಗಳನ್ನು ಒಳಗೊಂಡ ಕಾಯಕ ತತ್ವವು ವಿಶ್ವದ ಅತ್ಯುತ್ತಮ ಜ್ಞಾನದ ಕೊಡುಗೆಗಳಲ್ಲಿ ಒಂದು ಎಂದು ಅವರು ಸ್ಮರಿಸಿದರು.

ಸಮಾಜ ಕಟ್ಟಿದ ಮೇಲೆ ಕಾಯಕ ತಳಪಾಯವಾಗಿರುವುದು. ಕಾಯಕ ಇಲ್ಲದೇ ನಾವು ಬದುಕುವುದು ಅಸಾಧ್ಯ. ಸಮಾಜವನ್ನು ಕಟ್ಟುವುದು, ಮನುಷ್ಯರಾಗುವುದು ಕಾಯಕದ ಮೂಲಕ ಎಂದು ಕಾರ್ಲ್ ಮಾರ್ಕ್ಸ್‌ ಹೇಳಿದ.  ದುರಂತ ಎಂದರೆ ಎಲ್ಲ ವೃತ್ತಿಗಳು ಶ್ರೇಷ್ಠ ಎಂದು ನಾವು ತಿಳಿಯಲಿಲ್ಲ. ಕೆಲ ವೃತ್ತಿಗಳನ್ನು ಮಾತ್ರ ಶ್ರೇಷ್ಠ ಎಂದು ತಿಳಿದೆವು. ಅವುಗಳನ್ನು ಮಾಡುವವರು ಶ್ರೇಷ್ಠ ಎಂದು ಭಾವಿಸಿದೆವು. ಈ ಕಾರಣದಿಂದಲೇ ಜಾತಿ ವ್ಯವಸ್ಥೆ ಹುಟ್ಟಿತು. ಎಲ್ಲ ಕಾಯಕಗಳು ಸಮಾನ ಎಂದು ತಿಳಿಯದೇ ಅಸಮಾನತೆ ಸೃಷ್ಟಿಸಿದೆವು. ಇದರಿಂದ ಅನ್ಯಾಯಗಳಾದವು ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಬಸವಾದಿ ಶರಣರು ಮಾಡಿದ ಬಹು ದೊಡ್ಡ ಕ್ರಾಂತಿ ಎಂದರೆ ಎಲ್ಲ ಕಾಯಕಗಳು ಸಮಾನ ಎಂದಿದ್ದು ಸಾಮಾನ್ಯವಲ್ಲ. ಸಮಾಜ ವ್ಯವಸ್ಥೆಯನ್ನು ಬುಡಮೇಲು ಮಾಡಿ, ಕಾಯಕಗಳ ಪವಿತ್ರೀಕರಣ ಮಾಡಿದರು. ಅಂದರೆ ಯಾವುದೇ ಕಾಯಕವಾದರೂ ಪವಿತ್ರ ಎಂದು ತಿಳಿಯಬೇಕು ಎಂದು ಬಸವಾದಿ ಶರಣರು ಸಾರಿದರು. ಆದರೆ  21ನೇ ಶತಮಾನದಲ್ಲಿ ಸಮಾನತೆ ಕುರಿತು ಮಾತನಾಡುವಾಗಲೂ 12ನೇ ಶತಮಾನದ ಕ್ರಾಂತಿ ಕುರಿತು ಮಾತನಾಡುತ್ತೇವೆ. ಜೊತೆಗೆ ಸಮಾಜವಾದದ ಕಲ್ಪನೆ ಕೊಟ್ಟ ಮೇಲೂ   ಅಸಮಾನತೆ ಇದೆ. ಇದು ಕಸುಬಿನ ಬಗ್ಗೆ ತಪ್ಪು ಕಲ್ಪನೆಯಿಂದ ಆದುದು ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಕಾಯಕಗಳನ್ನು ಪವಿತ್ರ ಮಾಡುವುದರಿಂದ ಜಾತಿ ವಿನಾಶವೂ ಆಗುತ್ತದೆ. ಏಕೆಂದರೆ ಕಾಯಕ ಹಾಗೂ ಜಾತಿಯನ್ನು ಜೋಡಿಸಿದ ಪರಿಣಾಮ ಅಸಮಾನತೆ ಹೆಚ್ಚಿತು. ಆದರೆ ಜಾತಿ ವಿನಾಶವನ್ನು ಯಾರೂ ಪ್ರಶ್ನಿಸಲಿಲ್ಲ. ಜಾತಿ ವ್ಯವಸ್ಥೆಯಲ್ಲಿ ಶ್ರಮದ ವಿಭಜನೆ ಎಂದಾಗ ಅಂಬೇಡ್ಕರ್ ಅವರು ಅದು ಶ್ರಮ ವಿಭಜನೆ ಅಲ್ಲ, ಶ್ರಮಿಕರನ್ನು ವಿಭಜಿಸಿದರು ಎಂದರು. ಹಾಗೆಯೇ ಕಾಯಕದೊಳಗೆ ಮೇಲು-ಕೀಳು, ಶ್ರೇಷ್ಠ-ಕನಿಷ್ಠ ಎಂದು ವಿಭಜಿಸಿದಾಗ ಸಮಾಜ ಒಂದಾಗುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದು ಮಹತ್ವವಾದುದು ಎಂದು ವಿವರಿಸಿದರು.

ದಾಸೋಹ ತತ್ವ ಕುರಿತು ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಮಾತನಾಡಿ, ಕಾಯಕಕ್ಕೂ ದಾಸೋಹಕ್ಕೂ ಇರುವ ಅಂತರ್‍ಸಂಬಂಧ ಕಟ್ಟಿಕೊಟ್ಟಿದ್ದು ಶರಣರ ಚಳವಳಿ. ಆಯ್ದಕ್ಕಿ ಲಕ್ಕಮ್ಮ ಎತ್ತುವ ನೈತಿಕ ಪ್ರಶ್ನೆ ಎಂದರೆ- ಕಾಯಕದಷ್ಟೇ ದಾಸೋಹವೂ ಪವಿತ್ರೀಕರಣ. ಆದರೆ ಯಾವುದರಿಂದ ದಾಸೋಹ ನಡೆಸುತ್ತೇವೆ ಎನ್ನುವುದು ಮುಖ್ಯ ಎಂದರು.

ದಾಸೋಹವೆಂದರೆ ಪವಿತ್ರ ಕಾಯಕದ ಮೂಲಕ ಹಂಚಿ ತಿನ್ನುವ ಪ್ರಕ್ರಿಯೆ.  ಕೊಡುವವರು ಅಹಂಕಾರವನ್ನು ಕಳೆದಕೊಂಡು, ತೆಗೆದುಕೊಳ್ಳುವವರಲ್ಲಿ ದೈನ್ಯತೆ ದೂರ ಮಾಡಬೇಕು. ಹಾಗೆಯೇ ಮಹಾಮನೆಯು ವಿಶ್ವಮಾನವರನ್ನು ಕಟ್ಟಲು ಬಳಸಿದ್ದು, ದಾಸೋಹ. ಇವತ್ತಿನ ಸಂದರ್ಭದಲ್ಲಿ ಆಹಾರ ಮೀಮಾಂಸೆಯು ಮಡಿ-ಮೈಲಿಗೆ, ಮೇಲು-ಕೀಳು ಸೃಷ್ಟಿಸಿದೆ. ಆದರೆ ದಾಸೋಹ ಎಂದರೆ ಹಂಚಿಕೊಂಡು ತಿನ್ನುವುದು. ಅದು ಅಹಂಕಾರದಿಂದ ಅಲ್ಲ ಎಂದು ಹೇಳಿದರು.

ದಾಸೋಹವನ್ನು ಪ್ರಸಾದ ಎಂದು ಕರೆಯುತ್ತೇವೆ. ಅನ್ನವು ಪ್ರಸಾದಕ್ಕೆ ಆಗುವ ಗುಣ. ಆದರೆ ಅದು ನೈತಿಕತೆ ಮತ್ತು ಅಂತಃಕರಣವಾಗಬೇಕು. ಅನ್ನ ದಾಸೋಹಗಳೆಂದು ಪ್ರಚಾರ ಪಡೆಯುವುದು, ಬ್ಯಾನರ್‌ಗಳಲ್ಲಿ ಹೆಸರು, ಫೋಟೋ ಹಾಕಿಸಿಕೊಳ್ಳುವುದು ಪ್ರಶ್ನಾರ್ಹ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ, ಚಿಂತಕ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ,  ಕಾಯಕಕ್ಕೆ ಪರ್ಯಾಯವಾಗಿ ಕರ್ಮವೆಂದರು. ಕರ್ಮ ಸಿದ್ಧಾಂತದ ಮೂಲಕ ಜಾತಿ ವ್ಯವಸ್ಥೆಯನ್ನು ಕಟ್ಟಿ ಹಾಕಲಾಯಿತು. ಆದರೆ ಶರಣರು ಕರ್ಮದ ವಿರುದ್ಧ ಕಾಯಕ ತಂದರು. ಕರ್ಮವು ಸೋಮಾರಿಯಾಗಿಸಿದರೆ, ಕಾಯಕವು ಸೋಮಾರಿಗೊಳಿಸುವುದಿಲ್ಲ ಎಂದರು.

ಯಾರ ಹಂಗಿಗೂ ಒಳಗಾಗದೆ, ಯಾರಿಂದಲೂ ಪುಕ್ಕಟೆಯಾಗಿ ಸ್ವೀಕರಿಸದೆ, ಸ್ವಂತಕ್ಕಲ್ಲದೆ ಇತರರಿಗೂ ನೆರವಾಗುವುದು ಕಾಯಕ. ಇದು ಸಮಾನತೆ ಗುಣವನ್ನು ಪ್ರತಿಪಾದಿಸುವುದು.

ಕಾಯಕ ಕುರಿತು ಹೆಚ್ಚು ಮಾತನಾಡಿದವರು ಶ್ರಮ ಜೀವಿಗಳು. ಕಾಯಕವು ಜೀವನಕ್ಕೆ ಅಗತ್ಯವಾದ ವ್ಯಕ್ತಿಯ ಶ್ರಮದಲ್ಲಿ ಉನ್ನತೀಕರಣಗೊಳ್ಳುವುದು. ಡಿಗ್ನಿಟಿ ಆಫ್ ಲೇಬರ್ ಎನ್ನುವುದು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ, ಕಾಯಕವು ಮೊದಲು ವೃತ್ತಿಯಾಗಿತ್ತು. ಅದು ಜಾತಿಯನ್ನು ಸಂಕೇತಿಸುತ್ತಿತ್ತು. ಕಾಯಕ ತತ್ವವು ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಇಂತ ತತ್ವವನ್ನು ವಿಶ್ವದ ಯಾವುದೇ ಭಾಗದಲ್ಲೂ ಕಾಣಲು ಸಾಧ್ಯವಿಲ್ಲ. ಕಾಯಕದೊಂದಿಗೆ ಶರಣರು ತಂದಿದ್ದು ದಾಸೋಹ. ಅದುವರೆಗೆ ಭಿಕ್ಷೆಯ ಪದ್ಧತಿಯಿತ್ತು. ದಾನ ಕೊಡುವವನು ಶ್ರೇಷ್ಠ, ಪಡೆಯುವವನು ಕನಿಷ್ಠ ಎಂದರು.

ಗುರುವಿಗೆ ತನುವನ್ನು, ಲಿಂಗಕ್ಕೆ ಮನವನ್ನು, ಜಂಗಮನಿಗೆ ಧನವನ್ನು ಕೊಡಬೇಕು ಎಂದಿದೆ. ಆದರೆ ಕಾಯಕದಿಂದ ಗಳಿಸಿದ್ದನ್ನು ಮಾತ್ರ ಕೊಡಬೇಕು. ಹೀಗೆಯೇ ಸ್ವಾಮಿ ಎಂದರೆ ಶ್ರೇಷ್ಠ, ಭಕ್ತನೆಂದರೆ ಕನಿಷ್ಠ ಎನ್ನುವುದನ್ನು ಶರಣರು ಒಪ್ಪಲಿಲ್ಲ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹಿರಿಯೂರಿನ ತಿಪ್ಪೇಸ್ವಾಮಿ ಹಾಗೂ ಹೊಸದುರ್ಗದ ಸೈಯ್ಯದ್ ಮೋಸಿನ್ ವೇದಿಕೆ ಮೇಲಿದ್ದರು. ಕಾರ್ಯಕ್ರಮದ ನಂತರ ಸಾಣೇಹಳ್ಳಿ ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶಿಸಿದರು.

error: Content is protected !!