ರಂಭಾಪುರಿ ಪೀಠಕ್ಕೆ ರವಿಶಂಕರ್ ಗುರೂಜಿ ಭೇಟಿ
ರಂಭಾಪುರಿ ಪೀಠ, ನ. 5 – ಆರ್ಟ್ ಆಫ್ ಲೀವಿಂಗ್ನ ಸಂಸ್ಥಾಪಕ ರವಿಶಂಕರ್ ಗುರೂಜಿ ಕಳೆದ ವಾರ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ, ಕ್ಷೇತ್ರ ದರ್ಶನ ಮಾಡಿ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.
ಇದೇ ಪ್ರಥಮ ಬಾರಿಗೆ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ್ದು, ರವಿಶಂಕರ್ ಗುರೂಜಿ ಅವರನ್ನು ರಂಭಾಪುರಿ ಪೀಠದ ಸಿಬ್ಬಂದಿಗಳು ಶ್ರೀ ಪೀಠದ ಸಂಪ್ರದಾಯದಂತೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು.
ಬಳಿಕ ರವಿಶಂಕರ್ ಗುರೂಜಿ ಅವರು, ಶ್ರೀ ಪೀಠದ ಕ್ಷೇತ್ರನಾಥ ವೀರಭದ್ರಸ್ವಾಮಿ ದೇವಾ ಲಯ, ಭದ್ರಕಾಳಿ ಅಮ್ಮನವರ ದೇವಾಲಯ, ಜಗದ್ಗುರು ರೇಣುಕಾಚಾರ್ಯ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ರವಿಶಂಕರ್ ಗುರೂಜಿ ಅವರು, ರಂಭಾಪುರಿ ಜಗದ್ಗುರುಗಳಿಗೆ ಫಲ ಸಮರ್ಪಣೆ ಮಾಡಿದರು. ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ರವಿಶಂಕರ್ ಗುರೂಜಿ ಅವರಿಗೆ ಶಾಲು, ಏಲಕ್ಕಿ ಹಾರ ಹಾಗೂ ಶ್ರೀ ಪೀಠದ ಸಮಗ್ರ ಮಾಹಿತಿಯುಳ್ಳ ಅಕ್ಷಯ ಎಂಬ ಕೃತಿಯನ್ನು ನೀಡಿ ಗೌರವಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಂಭಾಪುರಿ ಜಗದ್ಗುರುಗಳು, ರವಿಶಂಕರ್ ಗುರೂಜಿ ರಂಭಾಪುರಿ ಪೀಠಕ್ಕೆ ನೀಡಿರುವ ಭೇಟಿ ಸೌಹಾರ್ದಯುತವಾಗಿದ್ದು, ಜಗದ್ಗುರುಗಳೊಂದಿಗೆ ಧಾರ್ಮಿಕ ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಧರ್ಮ – ಧರ್ಮಗಳ ನಡುವೆ, ಮನುಷ್ಯ – ಮನುಷ್ಯರ ಮಧ್ಯೆ ಜಾತಿ – ಜಾತಿಗಳ ನಡುವೆ ನಡೆಯುತ್ತಿರುವ ಸಂಘರ್ಷಗಳು ಕೊನೆಯಾಗಬೇಕಿದೆ. ಜಗತ್ತಿನೆಲ್ಲೆಡೆ ಶಾಂತಿ ಸೌಹಾರ್ದತೆ ಪ್ರೀತಿ – ವಿಶ್ವಾಸಗಳು ನೆಲೆ ನಿಲ್ಲಬೇಕಿದೆ. ಈ ನಿಟ್ಟಿನಲ್ಲಿ ಮಠಾಧೀಶರು, ಆಚಾರ್ಯರು, ಋಷಿ ಮುನಿಗಳು ಶ್ರಮಿಸಬೇಕಿದೆ. ಜನಪ್ರತಿನಿಧಿಗಳು ಸರ್ಕಾರಗಳೂ ಸಹ ಶಾಂತಿ, ಸಾಮರಸ್ಯ ಸ್ಥಾಪನೆಗೆ ಒತ್ತು ನೀಡಬೇಕಿದೆ ಎಂಬ ವಿಷಯ ಚರ್ಚೆಯ ಸಮಯದಲ್ಲಿ ಬಂದಿದೆ ಎಂದು ತಿಳಿಸಿದರು.
ರವಿಶಂಕರ್ ಗುರೂಜಿ ಭೇಟಿ ಸಂದರ್ಭದಲ್ಲಿ ಕಡೆನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು ಹಾಗೂ ಚನ್ನಗಿರಿಯ ಕೇದಾರ ಶಿವಶಾಂತವೀರ ಶಿವಾಚಾರ್ಯರು ಉಪಸ್ಥಿತರಿದ್ದರು.