ಮಾನವ ಕುಲ ಬದುಕಿನ ಮರ್ಮ ಅರಿತು ಮುನ್ನಡೆಯಬೇಕು

ಮಾನವ ಕುಲ ಬದುಕಿನ ಮರ್ಮ ಅರಿತು ಮುನ್ನಡೆಯಬೇಕು

ಹೊನ್ನಾಳಿ : `ಶರಣರು ಕಂಡ ಶಿವ’ ಪ್ರವಚನದ ಉದ್ಘಾಟನೆಯಲ್ಲಿ ಹಿರೇಕಲ್ಮಠದ ಶ್ರೀಗಳ ಹಿತನುಡಿ

ಹೊನ್ನಾಳಿ, ನ.3- ಮಾನವನನ್ನು ಮಹಾದೇವನನ್ನಾಗಿಸುವ ಪ್ರಯತ್ನವಾಗಿ `ಶರಣರು ಕಂಡ ಶಿವ’ ಪ್ರವಚನ ಮಾಲೆಯನ್ನು ಆಯೋಜಿಸ ಲಾಗಿದ್ದು, ಎಲ್ಲರೂ ಈ ಕಾರ್ಯಕ್ರಮದ ಸದ್ಭಳಕೆ ಮಾಡಿಕೊಳ್ಳಬೇಕಾಗಿ ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ ಕರೆ ನೀಡಿದರು.

ಪಟ್ಟಣದ ಮಾರಿಕೊಪ್ಪ ರಸ್ತೆಯಲ್ಲಿರುವ ಮೈದಾನದಲ್ಲಿ ಹೊನ್ನಾಳಿಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿದ್ಯಾಲಯದಿಂದ ನಿನ್ನೆ ಆಯೋಜಿಸಿದ್ದ `ಶರಣರು ಕಂಡ ಶಿವ ಪ್ರವಚನ ಮಾಲೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು.

ಸಕಲ ಜೀವಾತ್ಮಗಳಿಗೂ ಲೇಸನ್ನೇ ಬಯಸುವ ಶರಣರಿಗೆ ಜಾತಿ ಹಾಗೂ ಪಂಗಡಗಳ ಸೂತಕ ಇಲ್ಲ. ಶರಣರು ಆಚಾರ-ವಿಚಾರಗಳನ್ನು ಚಿಂತಿಸುವ ಸಂತ ಶ್ರೇಷ್ಠರು. ಶರಣರು ನುಡಿದಂತೆ ನಡೆದು, ನಡೆದಂತೆ ನುಡಿಯುವ ಶರಣರು. ಇಂದಿಗೂ ಎಲ್ಲರಿಗೂ ಮೇಲ್ಫಂಕಿ ಹಾಕಿಕೊಟ್ಟು ಆದರ್ಶ ಮೆರೆದಿದ್ದಾರೆ. ಇಂತಹ ಅನುಯಾಯಿಯಾಗಿ ಇದೊಂದು ದೇವತಾ ಕಾಯಕ ಎಂದು ತನ್ನನ್ನು ತಾನು ಅರಿತುಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.

ತಾನು ಮಾಡಿದ ಪಾಪ, ಪುಣ್ಯದ ಆಧಾರದ ಮೇಲೆ ನಮ್ಮ ಪುನರ್‌ ಜನ್ಮ ನಿರ್ಧಾರವಾಗುತ್ತದೆ. ಶರೀರದಲ್ಲಿ ಆತ್ಮ ಇದ್ದಾಗ ಮಾತ್ರ ಬೆಲೆ, ಇಲ್ಲದಿದ್ದರೆ ಶರೀರವನ್ನು ಹೆಸರಿನಿಂದ ಕರೆಯುವುದಿಲ್ಲ ಬದಲಾಗಿ ಮೃತ ಶರೀರ ಎಂದು ಕರೆಯುತ್ತಾರೆ.ಆದ್ದರಿಂದ ಬದುಕಿರುವ ದಿನಗಳಲ್ಲಿ ನಾವು ಇತರರಿಗೆ ಒಳ್ಳೆಯದನ್ನೇ ಮಾಡಿ ಪುಣ್ಯವನ್ನು ಸಂಪಾದಿಸೋಣ ಎಂದರು.

ಶಿವನು ಅಜನ್ಮ, ಅಯೋನಿಜ, ಅವ್ಯಕ್ತ, ಅಮರ, ಅವಿನಾಶ ಹಾಗೂ ಸರ್ವಶಕ್ತಿವಂತನಾಗಿದ್ದಾನೆ. ಶಿವನ ಮಹಿಮೆಯನ್ನು ಶಿವಶರಣರ ವಚನ ಸಾಹಿತ್ಯದಲ್ಲಿ ಅಪಾರವಾಗಿ ಪರಿಚಯಿಸಲಾಗಿದೆ. ವಿಶೇಷವಾಗಿ ಬಸವಣ್ಣನವರ ವಚನಗಳಲ್ಲಿ ಶಿವನನ್ನು ಬಹು ಸುಂದರವಾಗಿ ಪರಿಚಯಿಸಲಾಗಿದೆ ಎಂದು ದೃಷ್ಟಾಂತಗಳ ಮೂಲಕ ವಿವರಿಸಿದರು.

ಹಿರೇಕಲ್ಮಠದ ಶ್ರೀ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು  ಆಶೀರ್ವಚನ ನೀಡಿ, ಇಡೀ ಮಾನವಕುಲ ತಮ್ಮ ಬದುಕಿನ ಮರ್ಮವನ್ನು ಅರಿತುಕೊಂಡು ಮುನ್ನಡೆಯುವುದು ಅತ್ಯವಶ್ಯಕವಾಗಿದೆ. ಶರಣರು ಹೇಳಿದ್ದನ್ನು ಕೇಳುತ್ತೇವೆ, ಆದರೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಹಾಗಾಗಿ ನಾವು ಇಂದಿಗೂ ಮನುಷ್ಯರಾಗಿದ್ದೇವೆ ಹೊರತು ಮಹಾದೇವರಾಗಿಲ್ಲ ಎಂದು ತಿಳಿಸಿದರು.

ಶರಣರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ,  ಜೀವನದಲ್ಲಿ ಶಾಂತಿ-ನೆಮ್ಮದಿಯಿಂದ ಸೌಹಾರ್ದ ಜೀವನ ನಡೆಸಬೇಕೆಂದು ಕಿವಿಮಾತು ಹೇಳಿದರು.

ಪುರಸಭೆ ಅಧ್ಯಕ್ಷರಾದ ಸುಮಾ ಮಂಜುನಾಥ್ ಇಂಚರ, ಮಾರುತಿ ರೈಸ್ ಮಿಲ್ ಮಾಲೀಕ ಎಚ್.ಎ. ಉಮಾಪತಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ ಆರ್.ಬಂತಿ, ಓಂ ಗಣೇಶ್ ಟ್ರ್ಯಾಕ್ಟರ್ ಮಾಲೀಕ ಹರ್ಷ ಕಾಮತ್, ಇನ್‍ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ವಿನಯ್‍ಕುಮಾರ್, ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ಮಹೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು. 

ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಜ್ಯೋತಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

error: Content is protected !!