ಹರಪನಹಳ್ಳಿ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸುಭದ್ರಮ್ಮ ಒತ್ತಾಯ
ಹರಪನಹಳ್ಳಿ, ನ.2- ವಿಭಿನ್ನ ಭಾಷೆ, ಸಂಸ್ಕೃತಿ ಹೊಂದಿರುವ ಭಾರತ ದೇಶದಲ್ಲಿ ಕನ್ನಡ ಇತಿಹಾಸ ಹೊಂದಿರುವ ಏಕೈಕ ಭಾಷೆಯಾಗಿದೆ. ಕರ್ನಾಟಕದಲ್ಲಿ ಅನೇಕ ಭಾಷೆಗಳಿದ್ದರೂ ಕನ್ನಡವೇ ಆಡಳಿತ ಭಾಷೆಯಾಗಿದೆ. ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅನ್ಯ ಭಾಷೆ ಕಲಿಯಬೇಕು. ನಮ್ಮ ಕನ್ನಡ ಭಾಷೆಯನ್ನು ಉಳಿಸಲು ಎಲ್ಲರೂ ಮುಂದಾಗಬೇಕು. ಪರಭಾಷೆಗಳು ಕಿಟಕಿ, ಗವಾಕ್ಷಿಯಾಗಿರಬೇಕು, ಆದರೆ ನಮ್ಮ ಭಾಷೆ ಹೆಬ್ಬಾಗಿಲಾಗಿರಬೇಕು. ಕನ್ನಡದಲ್ಲಿಯೇ ಪರೀಕ್ಷೆಗಳನ್ನು ಬರೆದು, ದೇಶದಲ್ಲಿ ಉನ್ನತ ಹುದ್ದೆಗೇರಲು ಸಾಧ್ಯವಾಗಿದೆ. ಹಾಗಾಗಿ ಕನ್ನಡ ಭಾಷೆಗೆ ದಕ್ಕೆಯಾದರೆ ಅದನ್ನು ಉಳಿಸಲು ಮುಂದಾಗೋಣ. ನವೆಂಬರ್ ಕನ್ನಡಿಗರಾಗದೇ ನಂ 1 ಕನ್ನಡಿಗರಾಗಬೇಕು.ಸಾಧು, ಸಂತರು, ದಾಸರು, ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ `ಕನ್ನಡ ನಾಡು’ ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ. ಈ ಸುಂದರ ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ ಎಂದರು.
ಹಿರಿಯ ಸಾಹಿತಿ ಸುಭದ್ರಮ್ಮ ಮಾತನಾಡಿ, ರಾಜ್ಯದ ಆಡಳಿತ ಕೇಂದ್ರಗಳಲ್ಲಿ ಕನ್ನಡಕ್ಕೆ ಮಾನ್ಯತೆ ನೀಡಬೇಕು. ನಾಡು, ನುಡಿ ಅಭಿವೃದ್ಧಿಗೆ ಶ್ರಮಿಸಿದ ಎಲ್ಲಾ ಮಹನೀಯರನ್ನು ಸ್ಮರಿಸುವ ಮೂಲಕ ಕನ್ನಡ ಉಳಿಸಿ, ಬೆಳೆಸುವುದು ಎಲ್ಲಾ ಕನ್ನಡಿಗರ ಕರ್ತವ್ಯ. ಕನ್ನಡ ಒಂದು ದಿಟ್ಟ ಭಾಷೆಯಾಗಿದ್ದು, ದೇಶೀಯ ಭಾಷೆಯಲ್ಲಿ ಕನ್ನಡದ ಕಂಪನ್ನು ಬೀರುತ್ತಿದೆ. ಪಾಶ್ಚಿಮಾತ್ಯರು ಯೋಗ, ಭರತ ನಾಟ್ಯ ಎಂದು ನಮ್ಮ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಆದರೆ ನಾವು ಮಮ್ಮಿ, ಡ್ಯಾಡಿ ಎಂದು ಅವರತ್ತ ಮುಖ ಮಾಡಿದ್ದೇವೆ. ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಬೇಕು. ಉದ್ಯೋಗದಲ್ಲೂ ಕನ್ನಡಕ್ಕೆ ಮೀಸಲಾತಿ ನೀಡಬೇಕು. ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸಿದರೆ ಕನ್ನಡ ಸುಭದ್ರವಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯ ದರ್ಶಿ ಜಿ.ಮಹಾದೇವಪ್ಪ, ಗೌರವ ಕೋಶಾಧಿಕಾರಿ ಕೆ.ರಾಘವೇಂದ್ರ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕರಾದ ಎಚ್.ಜಯಶ್ರೀ, ಕನ್ನಡ ಸಾಹಿತ್ಯ ಪರಿಷತ್ ತೆಲಗಿ ಹೋಬಳಿ ಘಟಕದ ಅಧ್ಯಕ್ಷ ಕೆ.ಎಸ್.ವೀರಭದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ ಚಿಗಟೇರಿ ಹೋಬಳಿ ಘಟಕದ ಅಧ್ಯಕ್ಷ ಸಿ.ರಾಮನಗೌಡ, ಅರಸಿಕೇರಿ ಹೋಬಳಿ ಘಟಕದ ಅಧ್ಯಕ್ಷ ಎಂ.ಸುರೇಶ್, ಮುಖಂಡರಾದ ಬಿ. ರಂಗಪ್ಪ, ನಾಗರಾಜನಾಯ್ಕ ಸೇರಿದಂತೆ, ಇತರರು ಇದ್ದರು.