ಜಗಳೂರು : ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೀಮಂತ ಭಾಷೆ ಕನ್ನಡ

ಜಗಳೂರು : ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೀಮಂತ ಭಾಷೆ ಕನ್ನಡ

ಶಾಸಕ ಬಿ. ದೇವೇಂದ್ರಪ್ಪ

ಜಗಳೂರು, ನ.1- 8 ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೀಮಂತ ಭಾಷೆ ಕನ್ನಡ. ಗತವೈಭವದ ಇತಿಹಾಸ ಅರಿತು ನಾಡಿನ ರಕ್ಷಣೆಗೆ ಮುಂದಾಗೋಣ ಎಂದು  ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು.

ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ 68 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ  ಆಲೂರು ವೆಂಕಟ ರಾಯ, ಗೋವಿಂದ ಪೈ, ಶಿವರಾಮ ಕಾರಂತ ಸೇರಿದಂತೆ ಹಲವಾರು ಮಹನೀಯರ ನಿರಂತರ ಪರಿಶ್ರಮ ಅವಿಸ್ಮರಣೀಯವಾಗಿದೆ ಎಂದರು.

ಕನ್ನಡನಾಡು ಹಲವು ಧರ್ಮಗಳು, ವಿಶಿಷ್ಟ ಸಂಸ್ಕೃತಿ, ಪ್ರಾಕೃತಿಕ ಸೊಬಗು, ನದಿಗಳು, ಜನಜೀವನ ಶೈಲಿ, ಪೂರ್ವ ಜರ ಕಾಲದಿಂದಲೂ ಜಾನಪದ ಸೊಗಡು ಇಂದಿಗೂ ಜೀವಂತವಾಗಿವೆ. ಕವಿಗಳ, ರಸಋಷಿಗಳ ಬೀಡು ಎಂದು ಬಣ್ಣಿಸಿದರು. ಯುವಕರು ಉದ್ಯೋಗ ಅರಸಿ ವಿದೇಶಕ್ಕೆ ತೆರಳಿದರೂ ಕೊನೆಗೆ ತವರಿಗೆ ಮರಳಬೇಕಿದೆ. ಜನ್ಮ ನೀಡಿದ ಭೂಮಿ ಸ್ವರ್ಗದ ತಾಣವಿದ್ದಂತೆ ಎಂದರು.

ಈ ಬಾರಿ ಮೈಸೂರು ದಸರಾ ನಾಚಿಸುವಂತೆ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯೋತ್ಸವ  ಮಾಡುವ ಸಂಕಲ್ಪವಿತ್ತು. ಆದರೆ ಬರ‌ ಪರಿಸ್ಥಿತಿ ಯ ಮಧ್ಯೆ ಅದು ಈಡೇರಲಿಲ್ಲ. ಮುಂದಿನ‌ ಬಾರಿ ಸಮೃದ್ಧ ಮಳೆ, ಬೆಳೆಯಾದರೆ ಅದ್ಧೂರಿಯಾಗಿ ಆಚರಿಸೋಣ ಎಂದರು.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಪ್ರತಿಯೊಬ್ಬರೂ ಜಾಗೃತರಾಗಿ ಕನ್ನಡ ಭಾಷೆ, ನೆಲ, ಜಲ‌ ಉಳಿವಿಗಾಗಿ ಹೋರಾಟ ನಡೆಸಬೇಕಿದೆ. ಮುಂದಿನ ವರ್ಷ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧ ಜೀವನ ಸಾಗಲಿ ಅದ್ಧೂರಿಯಾಗಿ ಆಚರಿಸೋಣ  ಎಂದರು. ತಾಲ್ಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು ರೈತಾಪಿ ವರ್ಗ ಸಂಕಷ್ಟ ಅನುಭವಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ  ಸರ್ಕಾರ ಸರಳ, ಅರ್ಥಪೂರ್ಣ ಆಚರಣೆಗೆ ಆದೇಶಿಸಿದೆ ಎಂದರು.

ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿ ಮಾತ ನಾಡಿದ ತಹಶೀಲ್ದಾರ್ ಸೈಯ್ಯದ್ ಕಲೀಮುಲ್ಲಾ ಮಾತನಾಡಿ, ಮೈಸೂರು ಸಂಸ್ಥಾನದಿಂದ ವಿಭಜನೆ ಯಾಗಿ  ಕರ್ನಾಟಕ ಏಕೀಕರಣದ ಮೂಲಕ ಕರ್ನಾಟಕ ರಾಜ್ಯವಾಗಿ ನಾಮಕರಣವಾಗಿ ಇಂದಿಗೆ 50ನೇ ವರ್ಷದ ಕರ್ನಾಟಕ  ರಾಜ್ಯೋತ್ಸವ ಸಂಭ್ರಮ ರಾಜ್ಯವ್ಯಾಪಿ ವಿಜೃಂಭಿಸುತ್ತಿದೆ. ತಾಲ್ಲೂಕಿನಲ್ಲಿ ಪ್ರಖ್ಯಾತ ಕವಿ ಮಹಲಿಂಗರಂಗರ ಸಮಾಧಿ ಇರುವುದು ಹೆಮ್ಮೆ ಸಂಗತಿ ಎಂದು ಶುಭ ಸಂದೇಶ ನೀಡಿದರು.

ಸಾಹಿತಿ ಎನ್.ಟಿ. ಎರಿಸ್ವಾಮಿ ಮತ್ತು ಶಿಕ್ಷಕಿ ಆರ್.ವಾಣಿ ವಿಶೇಷ ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ, ತಿಪ್ಪೇಸ್ವಾಮಿ, ಲಲಿತಮ್ಮ, ಮಂಜಮ್ಮ, ಮಂಜುನಾಥ್, ಶಕೀಲ್ ಅಹಮ್ಮದ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ತಾ.ಪಂ ಇಓ ಕರಿಬಸಪ್ಪ, ಬಿಇಓ ಹಾಲಮೂರ್ತಿ, ಬಿಆರ್‌ಸಿ ಡಿ. ಹಾಲಪ್ಪ, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸಮಾಜಕಲ್ಯಾಣ ಇಲಾಖೆ ನಿವೃತ್ತ  ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ ಮುಂತಾದವರು ಉಪಸ್ಥಿತರಿದ್ದರು.

error: Content is protected !!