ದಾವಣಗೆರೆ, ನ. 1- ಸಾಲಕಟ್ಟೆ ಗ್ರಾಮ ಪಂಚಾಯ್ತಿಯ ಪಿಡಿಒ ಹಾಗೂ ಸದಸ್ಯೆ ಅನುಪಮ ಅವರ ಪತಿ ಸಿದ್ದಪ್ಪ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಡಾಟಾ ಎಂಟ್ರಿ ಆಪರೇಟರ್ ಪ್ರತಿಮಾ ಆರೋಪಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲ್ಲೆ ನಡೆದಿರುವ ಕುರಿತು ಹರಿಹರ ಗ್ರಾಮಾಂ ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಆದರೆ ನನ್ನ ಹೇಳಿಕೆ ಬದಲು ಎಫ್‌ಐಆರ್‌ನಲ್ಲಿ ಬೇರೆಯದೇ ಹೇಳಿಕೆ ನಮೂದಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.
ಕಚೇರಿಯಲ್ಲಿ ಅಧಿಕಾರಿಗಳು ಯಾರೂ ಇಲ್ಲದ ಸಮಯದಲ್ಲಿ ಬಂದು ದಾಖಲೆಗಳನ್ನು ಕೇಳುತ್ತಿದ್ದರು. ಅಧಿಕಾರಿಗಳು ಇಲ್ಲದ ವೇಳೆ ದಾಖಲೆಗಳನ್ನು ಕೊಡಲು ಬರುವುದಿಲ್ಲ ಎಂದು ಹೇಳಿದ್ದಾಗ ಅವರು ನನಗೆ ಬೆದರಿಕೆ ಹಾಕಿದ್ದರು.
ಅ.27ರಂದು ಬೆಳಿಗ್ಗೆ ಕಚೇರಿಗೆ ಬಂದ ಪಿಡಿಒ ಹಾಗೂ ಸಿದ್ದಪ್ಪ ನನ್ನನ್ನು ಎಳೆದಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಈ ಕುರಿತು ಹಾಗೂ ಎಫ್‌ಐಆರ್ ನಲ್ಲಿ ನನ್ನ ಹೇಳಿಕೆ ಬದಲಿಸುವ ಕುರಿತು ಎಸ್ಪಿ ಅವರಿಗೆ ದೂರು ನೀಡುವುದಾಗಿಯೂ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷ ಜೆ. ಅರುಣ್ ಕುಮಾರ್, ಎಸ್. ಅರುಣ್ ಕುಮಾರ್, ಪ್ರತಿಮಾ ಅವರ ಸಂಬಂಧಿ ರೇವಣಸಿದ್ದಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.
ಹರಿಹರ ತಾ.ಸಾಲಕಟ್ಟೆ ಗ್ರಾಂ.ಪಂ ಸದಸ್ಯರ ಪತಿ ಮತ್ತು ಪಿಡಿಓ ಅವರು ಸಿಬ್ಬಂದಿ ಮೇಲೆ ಮಾಡಿರುವ ಹಲ್ಲೆ ದೂರು, ಪ್ರತಿ ದೂರಿಗೆ ಸಂಬಂಧಿಸಿದಂತೆ ತಾ.ಪಂ. ಇಓ ತನಿಖೆ ನಡೆಸಿ ವರದಿ ನೀಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ನಿರ್ದೇಶನ ನೀಡಿದ್ದಾರೆ.