ರೈತರ ಪಂಪ್‌ಸೆಟ್‍ಗಳಿಗೆ 8 ಗಂಟೆ ವಿದ್ಯುತ್ ಪೂರೈಕೆಗೆ ಆಗ್ರಹ

ರೈತರ ಪಂಪ್‌ಸೆಟ್‍ಗಳಿಗೆ 8 ಗಂಟೆ  ವಿದ್ಯುತ್ ಪೂರೈಕೆಗೆ ಆಗ್ರಹ

ರಾಣೇಬೆನ್ನೂರಿನಲ್ಲಿ ನವಯುಗ ಸಂಘಟನೆಯ ನೇತೃತ್ವದಲ್ಲಿ ಬಾರಕೋಲು ಚಳವಳಿ

ರಾಣೇಬೆನ್ನೂರು, ಅ.30- ರೈತರ ಪಂಪ್‌ಸೆಟ್‍ಗಳಿಗೆ ಹಗಲು ವೇಳೆ 8 ಗಂಟೆ ವಿದ್ಯುತ್ ಪೂರೈಕೆ ಸೇರಿದಂತೆ, ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ, ನವಯುಗ ಸಂಘಟನೆಯ ನೇತೃತ್ವದಲ್ಲಿ ರೈತರು ಸೋಮವಾರ ಸರ್ಕಾರದ ವಿರುದ್ಧ ಬಾರಕೋಲು ಚಳವಳಿ ನಡೆಸಿದರು.

ಪ್ರತಿಭಟನೆ ನೇತೃತ್ವದ ವಹಿಸಿದ್ದ ಜಿ.ಪಂ. ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ್ ಮಾತನಾಡಿ, ರಾಜ್ಯ ಸರ್ಕಾರ ರಾಣೇಬೆನ್ನೂರು ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದೆ. ತಾಲ್ಲೂಕಿನಲ್ಲಿ ಕೆಲವೊಬ್ಬರು ಬೋರ್‍ವೆಲ್ ಸಹಾಯದಿಂದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ, ಹಗಲು ವೇಳೆ ಹೆಸ್ಕಾಂ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದೇ ಇರುವುದರಿಂದ ರೈತಾಪಿ ವರ್ಗದ ಜನ ದಿಕ್ಕು ತೋಚದಂತಾಗಿದ್ದಾರೆ. ಆದ್ದರಿಂದ ಕೂಡಲೇ ಹಗಲು ವೇಳೆ ಎಂಟು ಗಂಟೆ ವಿದ್ಯುತ್ ಪೋರೈಕೆ ಮಾಡಬೇಕು ಎಂದರು.

2023-24 ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ. 40 ರಷ್ಟು ಮಳೆ ಕೊರತೆಯಾಗಿದ್ದು, ಮುಂಗಾರು ಬೆಳೆ ಸಂಪೂರ್ಣ ವಿಫಲವಾಗಿದ್ದು, ರೈತರು ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದು, ಸಂಪೂರ್ಣ ಬೆಳೆ ನಾಶವಾಗಿರುತ್ತದೆ. ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡದ ಹೊರತು ಯಾವುದೇ ಪರಿಹಾರ ವನ್ನು ಈತನಕ ನೀಡಿರುವುದಿಲ್ಲ. ಕೂಡಲೇ ಎಕರೆಗೆ 40 ಸಾವಿರದಂತೆ ಬೆಳೆ ಪರಿಹಾರವನ್ನು ರೈತರಿಗೆ ನೀಡಬೇಕು. ಅಪ್ಪರ್ ತುಂಗಾ ಮೇಲ್ದಂಡೆ ಕಾಲುವೆ ನೀರನ್ನು ಈಗಲೇ ಸಮರ್ಪಕವಾಗಿ ವಿತರಣೆಯನ್ನು 120 ದಿನಗಳಿಂದ 150 ದಿನಗಳ ಅವಧಿಯನ್ನಾಗಿ ಮಾಡಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದರು.

ರಾಷ್ಟ್ರೀಕೃತ ಬ್ಯಾಂಕಗಳು, ಸಹಕಾರಿ ಬ್ಯಾಂಕ್‌ಗಳಲ್ಲಿ, ಸ್ವ-ಸಹಾಯ ಸಂಘ ಹಾಗು ಖಾಸಗಿ ಬ್ಯಾಂಕ್‌ಗಳಲ್ಲಿ ಮುಂಗಾರು ಬೆಳೆ ಸಾಲವನ್ನು ಪಡೆದಂತಹ ರೈತರಿಗೆ ಬ್ಯಾಂಕ್‌ಗಳು ಸಾಲ ವಸೂಲಾತಿ ನೋಟಿಸ್‍ಗಳನ್ನು ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ, ಉಪತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಕೆಇಬಿ ವಿನಾಯಕ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮಿನಿವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.

ಸಂಘಟನೆಯ ಮುಖಂಡರಾದ ಬಸವರಾಜ ರೊಡ್ಡನವರ, ಪ್ರಭುಸ್ವಾಮಿ ಕರ್ಜಗಿಮಠ, ಸೋಮಣ್ಣ ಹಲಗೇರಿ, ಗುಡ್ಡೇಶ್ ನಿಟ್ಟೂರ, ರಮೇಶ್ ಹೊನ್ನಾಳಿ, ಶಂಕರಗೌಡ ಗಂಗನಗೌಡ್ರ, ಪ್ರಭುಗೌಡ ಚನ್ನಗೌಡ್ರ, ಮಲ್ಲಿಕಾ ಮಾಸಣಗಿ, ಗಂಗಾಧರ್ ಬೂದನೂರು, ಹನುಮಂತರಾಜ್ ಚನ್ನಗೌಡರ, ಈರಣ್ಣ ಬುಡಪನಹಳ್ಳಿ, ಬಸನಗೌಡ ಪಾಟೀಲ್, ಗಣೇಶ್ ಗಡ್ಡೇರ, ಶೇಖರ್‍ಗೌಡ ಯಡಚಿ, ವೀರು ಪಾಟೀಲ್. ಎಂ.ಬಿ. ಪಾಟೀಲ್, ಗದಿಗೆಪ್ಪ ಬುಡಮಣ್ಣನವರ್, ಸಿದ್ದನಗೌಡ ಪಾಟೀಲ್, ಬಸವರಾಜ್ ಕುರುವತ್ತಿ, ಚಂದ್ರಪ್ಪ ಬಣಕಾರ, ಪ್ರಕಾಶ್ ಪಾಟೀಲ ಸೇರಿದಂತೆ ಇತರರಿದ್ದರು.

error: Content is protected !!