ದಲಿತ ಸಂಘರ್ಷ ಸಮಿತಿ ನಲ್ಕುಂದ ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಗ್ಗೆರೆ ರಂಗಪ್ಪ
ದಾವಣಗೆರೆ, ಅ.30- ದಲಿತರು ಶೈಕ್ಷಣಿಕ ವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಮುಂದುವರಿದು, ಅಂಬೇಡ್ಕರ್ ಕನಸು ಈಡೇರಿಸಲು ಮುಂದಾಗಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ ಕರೆ ನೀಡಿದರು. ನಲ್ಕುಂದ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಲಿತರ ಮೇಲಿನ ದಬ್ಬಾಳಿಕೆ ನಿಲ್ಲಬೇಕೆಂದರೆ ದಲಿತರು ಆರ್ಥಿಕ ಮತ್ತು ರಾಜಕೀಯವಾಗಿ ಸದೃಢರಾಗ ಬೇಕು. ಅಂಬೇಡ್ಕರ್, ಕನಕದಾಸ, ಬಸವಣ್ಣ, ವಾಲ್ಮೀಕಿ ಮಾನವತಾವಾದಿಗಳು. ಇವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ವಿಶ್ವಮಾನವರನ್ನಾಗಿ ನೋಡಬೇಕು. ಸ್ವಾರ್ಥಕ್ಕಾಗಿ ದಲಿತ ಸಂಘಟನೆಗಳು ವಿಘಟನೆ ಆಗುತ್ತಿರುವುದು ವಿಷಾದನೀಯ. ದಲಿತರನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ರಾಜಕಾರಣಿಗಳಿಂದ ದೂರವಿರ ಬೇಕು. ಪರಮ ಶ್ರೇಷ್ಠ ಗ್ರಂಥವಾದ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಂವಿಧಾನ ಉಳಿದರೆ ಮಾತ್ರ ಭಾರತ ಉಳಿಯಲಿಕ್ಕೆ ಸಾಧ್ಯ ಎಂದರು.
ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ ಉಚ್ಚಂಗಿ ಪ್ರಸಾದ್ ಮಾತನಾಡಿ, ಸಾಮಾನ್ಯ ಬಡವ ದೇಶದ ಚುಕ್ಕಾಣಿ ಹಿಡಿದಾಗ ಅಂಬೇಡ್ಕರ್ ಆಶಯ ಈಡೇರುತ್ತದೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಮತದಾನ ನೀಡಿದ ಏಕೈಕ ವ್ಯಕ್ತಿ ಅಂಬೇಡ್ಕರ್. `ಶಿಕ್ಷಣ ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಮಾತ್ರ ಘರ್ಜಿಸಬಲ್ಲರು’ ಎಂಬ ಬಾಬಾ ಸಾಹೇಬರ ನುಡಿ ಪಾಲಿಸಿ, ನಮ್ಮ ದಲಿತ ಪೋಷಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡುವ ಮೂಲಕ ಅಂಬೇಡ್ಕರ್ ಅವರ ಕನಸನ್ನು ಈಡೇರಿಸಬೇಕು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಸಂಚಾಲಕ ಹೂವಿನಮಡು ಅಂಜಿನಪ್ಪ, ದಲಿತ ಸಂಘಟನೆ ಇಂದು ದೊಡ್ಡ ಶಕ್ತಿಯಾಗಿ ಕರ್ನಾಟಕದಲ್ಲಿ ಬೆಳೆದಿದೆ. ಕರ್ನಾಟಕದಲ್ಲಿ ದಲಿತರು ಉಸಿರಾಡುತ್ತಿರುವುದು ಪ್ರೊ. ಬಿ. ಕೃಷ್ಣಪ್ಪನವರ ಶ್ರಮದ ಪ್ರತೀಕವಾಗಿ, ದಲಿತರು ಇಂದು ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿಯು ಬಡವರ ಗುಡಿಸಲಲ್ಲಿ ಹೋರಾಟದ ಹಣತೆ ಹಚ್ಚಿದ್ದು ಅದು ಆರದಂತೆ ನೋಡಿಕೊಳ್ಳಿ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ತಾಲ್ಲೂಕು ಸಂಚಾಲಕ ಗುಮ್ಮನೂರು ರಾಮಚಂದ್ರಪ್ಪ, ನಮ್ಮ ನಮ್ಮ ಸ್ವಾರ್ಥದಿಂದ ದಲಿತ ಸಂಘಟನೆ ಒಡೆದು ಹೋಗುತ್ತಿರುವುದು ದುರಂತದ ಸಂಗತಿ ಎಂದರು.
ಸಭೆಯಲ್ಲಿ ಜಗಳೂರು ತಾಲ್ಲೂಕು ಸಂಚಾಲಕ ಸತೀಶ್ ಮಲೆಮಾಚಿಕೆರೆ, ಹರಿಹರ ಸಂಚಾಲಕ ಮಂಜುನಾಥ, ನ್ಯಾಮತಿ – ಹೊನ್ನಾಳಿ ತಾಲ್ಲೂಕು ಸಂಚಾಲಕ ಹಾಲೇಶ್, ಜಿಲ್ಲಾ ಸಂಚಾಲಕ ಗೋವಿಂದರಾಜ್, ಪದಾಧಿಕಾರಿಗಳಾದ ಅಳಗವಾಡಿ ನಿಂಗರಾಜ್, ರವಿ ಬಾಬು, ಪ್ರಶಾಂತ್ ಆನಗೋಡು, ಕುಮಾರ್ ಬೇತೂರು, ಕೋಲ್ಕುಂಟೆ ಚಂದ್ರಪ್ಪ, ಮಹೇಶ್ ಬಾಡ, ಗೋಪಾಲ್ ನಲ್ಕುಂದ ಮತ್ತು ಇತರರು ಭಾಗವಹಿಸಿದ್ದರು.