ರಾಣೇಬೆನ್ನೂರು, ಅ.30- ಬರ ಅಧ್ಯಯನಕ್ಕಾಗಿ ಜಿಲ್ಲೆಗೆ ಆಗಮಿಸಿದ್ದ ರಾಜ್ಯ ಬಿಜೆಪಿ ತಂಡವು ರಾಣೇಬೆನ್ನೂರು ತಾಲ್ಲೂಕಿನ ರಾಹುತನಕಟ್ಟಿ, ಹೂಲಿಹಳ್ಳಿ ಹಾಗೂ ಹಾವೇರಿ ತಾಲ್ಲೂಕಿನ ನೆಲೋಗಲ್ಲ ಗ್ರಾಮದ ರೈತರ ಜಮೀನನಲ್ಲಿ ಸೋಮವಾರ ಬೆಳೆ ಹಾನಿಯ ಕುರಿತು ಸಮೀಕ್ಷೆ ನಡೆಸಿತು.
ರಾಹುತನಕಟ್ಟಿ ಗ್ರಾಮದ ಚಿಕ್ಕಪ್ಪ ಕಂಬಳಿ ಎಂಬ ರೈತನ ಜಮೀನಿನಲ್ಲಿ ಬೆಳೆ ಹಾನಿಯಾದ ಕುರಿತು ರೈತರೊಂದಿಗೆ ಚರ್ಚಿಸಿದರು. ನೆಲೋಗಲ್ಲ ಗ್ರಾಮದ ರೈತ ವೀರಪ್ಪ ಎಂಬುವರು ತಂಡದ ಎದುರು ಜಮೀನಿನಲ್ಲಿ ಒಣಗಿ ನಿಂತಿದ್ದ ಮೆಕ್ಕೆಜೋಳ ಬೆಳೆಯನ್ನು ಟ್ರ್ಯಾಕ್ಟರ್ನಿಂದ ನಾಶಪಡಿಸಿದರು.
ನಂತರ ಮಾಜಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಇಷ್ಟೊಂದು ಕೆಟ್ಟ ಬರಗಾಲ ಎಂದೂ ಆಗಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಪಂದಿಸಬೇಕಿತ್ತು. ಆದರೆ, ರೈತರಿಗೆ ಈವರೆಗೂ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಬರಗಾಲದ ಬಗ್ಗೆ ಒಂದೇ ಒಂದು ನಯಾಪೈಸೆ ಕೂಡ ಬಿಡುಗಡೆಯಾಗಿಲ್ಲ. ಕಳೆದ ವರ್ಷ ಅತಿವೃಷ್ಠಿ ಉಂಟಾದ ಸಮಯದಲ್ಲಿ 2100 ಕೋಟಿ ರೂ. ಬಿಡುಗಡೆ ಮಾಡಿದ್ದೆವು. ಕೇಂದ್ರ ಸರ್ಕಾರದ ಅನುದಾನಕ್ಕಿಂತ ಹೆಚ್ಚಿನ ಅನುದಾನ ನೀಡಲಾಗಿದೆ. ಆದರೆ, ಇಂದಿನ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ ಎಲ್ಲಿಯೂ ಒಂದು ರೂ. ಪರಿಹಾರ ಕೊಟ್ಟಿಲ್ಲ. ಅವರು ಕೇವಲ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ ಎಂದು ಹೇಳಿಕೊಂಡು ಹೋಗುತ್ತಿದ್ದಾರೆಯೇ ಹೊರತು, ರೈತರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಯಾಗಲೀ, ಉಪ ಮುಖ್ಯಮಂತ್ರಿ ಯಾಗಲೀ ಮಾತನಾಡುತ್ತಿಲ್ಲ. ರೈತರಿಗೆ ಬದುಕಿಸುತ್ತೇವೆ ಎನ್ನುವ ಮಾತನ್ನು ಹೇಳುತ್ತಿಲ್ಲ.
ಕಳೆದ ವರ್ಷ ಹೆಚ್ಚಿನ ಮಳೆಯಾದಾಗ ನಾವು ಎನ್ಡಿಆರ್ಎಫ್ ಸೂಚಿಸಿದ ಪರಿಹಾರ ಮೊತ್ತಕ್ಕಿಂತ ಡಬಲ್ ಹಣ ಪರಿಹಾರವಾಗಿ ಕೊಟ್ಟಿದ್ದೇವೆ. ಆದರೆ, ಈ ಬಾರಿ ಕಾಂಗ್ರೆಸ್ನವರು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಲು ಸೂಚನೆ ಕೊಟ್ಟಿದ್ದಾರೆ. ಆದ್ದರಿಂದ ಅಧಿಕಾರಿಗಳೂ ಸಹ ಸಂಪೂರ್ಣ ಬೆಳೆ ಹಾನಿಯಾಗಿದ್ದರೂ ಶೇ. 10, 20 ಮಾತ್ರ ದಾಖಲಾತಿಯಲ್ಲಿ ತೋರಿಸಿದ್ದಾರೆ. ಹೀಗಾಗಿ ರೈತರಿಗೆ ಪರಿಹಾರ ಬರುವಲ್ಲಿ ಮೋಸವಾಗುತ್ತಿದೆ ಎಂದು ಆರೋಪಿಸಿದರು.
ಹಿರೇಕೆರೂರಿನಲ್ಲಿ ಕಾಡು ಪ್ರಾಣಿಗಳು ಬಂದು 5 ಎಕರೆ ಮೆಕ್ಕೆಜೋಳ ಸಂಪೂರ್ಣ ಹಾಳಾಗಿದೆ. ಅದಕ್ಕೆ ಪರಿಹಾರವಾಗಿ ಸರ್ಕಾರ 2804 ರೂ. ಕೊಟ್ಟಿದ್ದಾರೆ. ಈ ರೀತಿಯಾದರೆ ರೈತರು ಬದುಕೋದು ಹೇಗೆ? ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಇವರು ಗ್ಯಾರಂಟಿಗಳನ್ನು ಕೊಡಲಿ ಬೇಡ ಅನ್ನುವುದಿಲ್ಲ. ಆದರೆ, ನಮ್ಮ ರೈತರನ್ನು ಕೈ ಬಿಡದ ರೀತಿಯಲ್ಲಿ ಬರಗಾಲ ಪರಿ ಸ್ಥಿತಿಯನ್ನು ಸರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ಮಾಜಿ ಶಾಸಕರಾದ ಕಳಕಪ್ಪ ಬಂಡಿ, ಅರುಣಕುಮಾರ ಪೂಜಾರ, ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ಪ್ರಮುಖರಾದ ಗವಿಸಿದ್ದಪ್ಪ, ಬಸವರಾಜ ಹುಲ್ಲತ್ತಿ, ಸಿದ್ದರಾಜ ಕಲಕೋಟಿ, ಭೋಜರಾಜ ಕರೂದಿ, ಭಾರತಿ ಜಂಬಗಿ, ಕೆ. ಶಿವಲಿಂಗಪ್ಪ, ಮಂಜುನಾಥ ಓಲೇಕಾರ, ಎ.ಬಿ. ಪಾಟೀಲ, ದೀಪಕ ಹರಪನಹಳ್ಳಿ, ಸಿದ್ದು ಚಿಕ್ಕಬಿದರಿ, ಪಾಲಾಕ್ಷಗೌಡ ಪಾಟೀಲ ಸೇರಿದಂತೆ ಇತರರಿದ್ದರು.