ಬೃಹತ್ ಉದ್ಯೋಗ ಮೇಳದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ
ಹರಿಹರ, ಅ,30- ನಿರುದ್ಯೋಗಿ ಯುವಕ- ಯುವತಿಯರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯಲು ಉದ್ಯೋಗ ಮೇಳಗಳು ಸಹಕಾರಿಯಾಗಲಿವೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿ. ಮಲ್ಲಿಕಾರ್ಜುನಪ್ಪ ಶ್ರೀಮತಿ ಜಿ.ಎಂ. ಹಾಲಮ್ಮ ಚಾರಿಟಿ ಫೌಂಡೇಶನ್, ಜಿ.ಎಂ.ಐ.ಟಿ ತರಬೇತಿ ಮತ್ತು ಉದ್ಯೋಗ ವಿಭಾಗ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಹರಿಹರ) ಇವರ ಸಂಯುಕ್ತಾಶ್ರಯದಲ್ಲಿ ಇಂದು ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಹಳಷ್ಟು ನಿರುದ್ಯೋಗಿ ಯುವಕರು, ಅದರಲ್ಲೂ ಗ್ರಾಮೀಣ ಭಾಗದ ಯುವಕ-ಯುವತಿಯರು ಉದ್ಯೋಗ ಮೇಳಗಳಿಂದ ಉದ್ಯೋಗ ಪಡೆದುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಂಡು ಉತ್ತಮ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ.
ಹಲವಾರು ವರ್ಷಗಳಿಂದ ನಮ್ಮ ಫೌಂಡೇಶನ್ನಿಂದ ಉದ್ಯೋಗ ಮೇಳ, ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮದೇ ಕಾಲೇಜಿನ ನೂರಾರು ಮತ್ತು ವಿವಿಧ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ನಾವು ನಡೆಸಿದ ಉದ್ಯೋಗ ಮೇಳಗಳಲ್ಲಿ ಆಯ್ಕೆಯಾಗಿ ದೇಶ-ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇಂದಿನ ಉದ್ಯೋಗ ಮೇಳದಲ್ಲಿ 56 ದೇಶ, ವಿದೇಶದ ಕಂಪನಿಗಳು ಭಾಗವಹಿಸುತ್ತಿದ್ದು 6215 ಉದ್ಯೋಗಗಳು ಲಭ್ಯವಿರುತ್ತವೆ. ಈಗಾಗಲೇ ಆನ್-ಲೈನ್ ಮುಖಾಂತರ 5664 ಯುವಕ, ಯುವತಿಯರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೇ ಕೆಲವರು ನೇರವಾಗಿ ಇಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇಂದಿನ ಮೇಳದಲ್ಲಿ 6 ಸಾವಿರ ಜನರಿಗೆ ಉದ್ಯೋಗ ದೊರೆತರೆ ಅದು ನಮ್ಮ ಸಂಸ್ಥೆಯ ಸಾರ್ಥಕ ಸೇವೆಯಲ್ಲಿ ಒಂದಾಗುತ್ತದೆ ಎಂದು ಹೇಳಿದರು.
ಇದಲ್ಲದೆ ಮುಂಬರುವ ದಿನಗಳಲ್ಲಿ ಜಿಲ್ಲೆಯ ಚನ್ನಗಿರಿ ಹಾಗೂ ಜಗಳೂರಿನಲ್ಲಿಯೂ ಸಹ ಉದ್ಯೋಗ ಮೇಳಗಳನ್ನು ನಮ್ಮ ಸಂಸ್ಥೆ ನಡೆಸಲಿದೆ. ನ್ಯಾಮತಿ, ಹರಪನಹಳ್ಳಿ ಮತ್ತು ಸಂತೆಬೆನ್ನೂರುಗಳಲ್ಲಿ ಉಚಿತ ಆರೋಗ್ಯ ಮತ್ತು ರಕ್ತದಾನ ಶಿಬಿರಗಳನ್ನು ನಡೆಸಲಿದೆ. ಆರೋಗ್ಯ ಶಿಬಿರಗಳಲ್ಲಿ ಬಡವರಿಗೆ ಔಷಧೋಪಚಾರ ಮತ್ತು ಕೆಲವು ಆಯ್ದ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ನಗರದ ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಯಾದ ಕಿರ್ಲೋಸ್ಕರ್ ಸಂಸ್ಥೆ ಹಲವಾರು ಕಾರಣಗಳಿಂದ ಬಂದಾಯಿತು. ಆಗಿನಿಂದ ಹರಿಹರದಲ್ಲಿ ನೊಂದಂತಹ ಶ್ರಮಿಕ ಜನರು ಬಹಳಷ್ಟು ಇದ್ದಾರೆ. ಅವರು ಜೀವನವನ್ನು ಬಹಳ ದುಃಸ್ತರವಾಗಿ ನಡೆಸುತ್ತಿದ್ದಾರೆ. ಇದನ್ನು ಜನಪ್ರತಿನಿಧಿಗಳಾದ ನಾವು ಗಮನಿಸಬೇಕಾಗುತ್ತದೆ ಎಂದರು.
ಡಾ. ತೇಜಸ್ವಿ ಕಟ್ಟಿಮನಿ, ಪ್ರಭುದೇವ್, ಪ್ರಾಂಶುಪಾಲ ಪ್ರೊ.ವಿರೂಪಾಕ್ಷಪ್ಪ ಮುಂತಾದವರು ಮಾತನಾಡಿದರು.
ಈ ಸಮಯದಲ್ಲಿ ಎಚ್.ಎಂ. ಕಿರಣ್ ಕುಮಾರ್, ಜಿ.ಎಸ್ ಅನಿತ್ ಕುಮಾರ್, ಸುರೇಶ್, ಸಂಜಯ್ ಪಾಂಡೆ, ಸಂಸದರ ಧರ್ಮಪತ್ನಿ ಜಿ.ಎಂ.ಗಾಯತ್ರಿ, ನಗರಸಭೆ ಸದಸ್ಯರುಗಳಾದ ಅಶ್ವಿನಿ ಕೃಷ್ಣ, ಹನುಮಂತಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಘಟಕದ ಅಧ್ಯಕ್ಷ ಲಿಂಗರಾಜ್, ಮಾಗನೂರು ಪ್ರಭು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಗದೀಶ್, ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಜಿ.ಎಂ. ಲಿಂಗರಾಜ್ ಸೇರಿದಂತೆ ಇತರರು ಹಾಜರಿದ್ದರು.