ಸದೃಢ ದೇಹದಿಂದ ಸದೃಢ ಮನಸ್ಸು : ಪೊಲೀಸ್ ಅಧಿಕಾರಿ ಸೋಮಶೇಖರ್

ಸದೃಢ ದೇಹದಿಂದ ಸದೃಢ ಮನಸ್ಸು : ಪೊಲೀಸ್ ಅಧಿಕಾರಿ ಸೋಮಶೇಖರ್

ದಾವಣಗೆರೆ, ಅ. 29- ಸದೃಢವಾದ ದೇಹವಿದ್ದಲ್ಲಿ ಸದೃಢ ಮನಸ್ಸು ಇರುತ್ತದೆ. ಮಾನಸಿಕ ಸದೃಢತೆಗಾಗಿ ಯಾವುದಾದರೊಂದು ಕ್ರೀಡೆಯಲ್ಲಿ ಸದಾ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಪೊಲೀಸ್ ಅಧಿಕಾರಿ ಸೋಮಶೇಖರ್ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಗ್ರೂಪ್ ಆಫ್ ಐರನ್ ಗೇಮ್ಸ್ (ಉಕ್ಕಿನ ಕ್ರೀಡೆಗಳ ಒಕ್ಕೂಟ) ವತಿಯಿಂದ ಜೀವ ಮಾನ ಸಾಧನಾ ಪ್ರಶಸ್ತಿ ಪಡೆದ ಪವರ್ ಲಿಫ್ಟರ್ ಮಹೇಶ್ವರಯ್ಯ ಅವರ ಅಭಿನಂ ದನಾ ಸಮಾರಂಭದಲ್ಲಿ ಮಾತನಾಡಿದರು.

ಸಾಧಿಸುವ ಛಲ, ಗೆಲ್ಲುವ ಗುರಿ ಇದ್ದರೆ ಸಾಧನೆ ಸುಲಭ ಎನ್ನುವುದಕ್ಕೆ ಮಹೇಶ್ವರಯ್ಯ ಅವರೇ ತಾಜಾ ಉದಾಹರಣೆ. ಇಂದಿನ ಯುವಕರಿಗೆ ಅವರು ಸ್ಫೂರ್ತಿಯಾಗಿದ್ದಾರೆ. ಅವರಲ್ಲಿ ಛಲ ಇರುವ ಕಾರಣ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ವಿಜೇತರಾಗಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ಪ್ರಶಂಸಿಸಿದರು.

ಭವ್ಯ ಭಾರತದ ಪ್ರಜೆಗಳನ್ನು ನಿರ್ಮಾಣ ಮಾಡಲು ಕ್ರೀಡಾ ಕ್ಷೇತ್ರ ಸಹಕಾರಿಯಾಗಲಿದೆ. ದೇಶಕ್ಕೆ ಕೀರ್ತಿ ತರುವಂತಹ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ, ಬೆಳಸಬೇಕಾಗಿದೆ ಎಂದು ಹೇಳಿದರು.

ಪಿಎಸ್‌ಐ ಕೆ.ಎನ್. ಶೈಲಜಾ ಮಾತನಾಡಿ, ಕ್ರೀಡಾ ಕ್ಷೇತ್ರಕ್ಕೆ ಮಹಿಳೆಯರು ಹೆಚ್ಚು ಹೆಚ್ಚು ಪಾದರ್ಪಣೆ ಮಾಡಬೇಕು. ಮಹಿಳಾ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಅವಶ್ಯವಿದೆ ಎಂದರು.

ಹೆಚ್ಚಾಗಿ ಮಧ್ಯದ ವರ್ಗದವರೇ ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ. ಅವರಿಗೆ ಕ್ರೀಡಾಭಿಮಾನಿಗಳ, ಕ್ರೀಡಾ ಪ್ರೋತ್ಸಾಹಕರ, ದಾನಿಗಳ ಸಹಕಾರ ಅತ್ಯಗತ್ಯ. ಶೇ. 5 ಕ್ರೀಡಾ ಮೀಸಲಾತಿ ಇರುವ ಕಾರಣದಿಂದ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ್ದರಿಂದಲೇ ಪೊಲೀಸ್ ಅಧಿಕಾರಿಯಾಗಿ ಉನ್ನತ ಸ್ಥಾನ ಗಳಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಬೇರೆ ಬೇರೆ ಹಾದಿಗಳನ್ನು ಹಿಡಿಯದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಬದುಕನ್ನು ಕಟ್ಟಿಕೊಳ್ಳುವತ್ತ ಎಲ್ಲರ ಪ್ರಯತ್ನ ಇರಬೇಕು ಎಂದರು.

ಯುವ ರಾಜಕಾರಣಿ, ಉದ್ಯಮಿ ಸಮರ್ಥ ಶಾಮನೂರು ಮಾತನಾಡಿ, ಮನೆಯಿಂದ ಹೊರಬಂದಾಗ ಮನೆ, ಊರು, ರಾಜ್ಯ, ದೇಶದ ಗೌರವ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು. ಕ್ರೀಡೆಗಳಿಗೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು. 

ಇದೇ ವೇಳೆ ಅಂತರಾಷ್ಟ್ರೀಯ ಪವರ್ ಲಿಫ್ಟ್‌ರ್, `ಜೀವಮಾನ ಸಾಧನಾ’ ಪ್ರಶಸ್ತಿ ಪುರಸ್ಕೃತ ಮಹೇಶ್ವಯ್ಯ ಅವರನ್ನು ಗೌರವಿಸಲಾಯಿತು.

ಉದ್ಯಮಿ ದಾದಾಪೀರ್ ಕ್ರೀಡೆಗಳ ಮಹತ್ವ ಕುರಿತು ಮಾತನಾಡಿದರು. ಅಂತರಾಷ್ಟ್ರೀಯ ಕ್ರೀಡಾಪಟುಗಳಾದ ಹೆಚ್. ದಾದಾಪೀರ್, ಜೆ.ಎನ್. ಶ್ರೀನಿ ವಾಸ್, ಪ್ರಕಾಶ್ ಕಾರಂತ್ ಶಿವಮೊಗ್ಗ, ನಟರಾಜ್, ಮಹೇಶ್ವರಯ್ಯ, ಎಂ.ಹೆಚ್. ಷಣ್ಮುಖ, ನಂದೀಶ್, ರಜ್ವಿಖಾನ್ ಮತ್ತಿತರರಿದ್ದರು.

error: Content is protected !!