ರಾಣೇಬೆನ್ನೂರು, ಅ.29- ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹುಟ್ಟಿಕೊಂಡ `ನವಯುಗ’ ಸಂಘಟನೆಯಿಂದ ಸರ್ಕಾರದ ವೈಫಲ್ಯಗಳ ವಿರುದ್ದ ನಾಳೆ ದಿನಾಂಕ 30 ರ ಸೋಮವಾರ ಬಾರಕೋಲ್ ಚಾಟಿ ಕಟಿಯುವುದರೊಂದಿಗೆ ಪ್ರತಿಭಟಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸುವುದಾಗಿ ಸಂಘಟನೆ ಸಂಚಾಲಕ ಸಂತೋಷ ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈತರಿಗೆ ಪ್ರತಿದಿನ 6 ತಾಸು ಕರೆಂಟು ಕೊಡಬೇಕು, ರೈತರ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ವಸೂಲಿಯನ್ನು ಒಂದು ವರ್ಷಕಾಲ ಮುಂದೂಡಬೇಕು. ಅವರ ಬೆಳೆ ವಿಮಾ ಹಣವನ್ನು ತಕ್ಷಣ ವಿತರಿಸುವ ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆ ನವಯುಗದ್ದಾಗಿದ್ದು, ಕೆಇಬಿ ಗಣೇಶ ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆಂದು ಪಾಟೀಲ ವಿವರಿಸಿದರು.
ತನ್ನ ಸರ್ಕಾರದ ಅವಧಿಯಲ್ಲಿ ತಾಲ್ಲೂಕಿನ 10500 ರೈತರ ಬೆಳೆ ವಿಮಾ ಹಣ ಬಾಕಿ ಇಟ್ಟು ಕೊಂಡಿದ್ದ ಬಿಜೆಪಿ, ಈಗ ರೈತರ ಪರ ಹೋರಾಟ ಮಾಡುವ ನೈತಿಕ ಹಕ್ಕು ಕಳೆದು ಕೊಂಡಿದೆ ಎಂದ ಸಂತೋಷ, ನೂತನ ಶಾಸಕ ಪ್ರಕಾಶ ಕೋಳಿವಾಡ ಅವರು, ಸರ್ವ ಪಕ್ಷಗಳ ಮುಖಂಡರು, ರೈತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜಂಟಿ ಸಭೆ ಕರೆದು ಚರ್ಚಿಸಬೇಕು ಎಂದು ಸಂತೋಷ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.