ರಾಣೇಬೆನ್ನೂರು, ಅ.27- ಸ್ವಾಮೀಜಿ ಮಾಂಸಾಹಾರದ ವಿರೋಧಿಯಲ್ಲ. ನಿಮಗೆ ಬೇಕೆನಿಸಿ ದಾಗ ಅವಶ್ಯವಿದ್ದಷ್ಟು ತಂದು ಊಟ ಮಾಡಿ. ಆದರೆ ಅನಾಚಾರದ ಹಬ್ಬ ಹಾಗೂ ಮೌಢ್ಯದ ಆಚರಣೆಯಿಂದ ಕೈಯ್ಯಲ್ಲಿದ್ದ ಹಣ ಕಳೆದುಕೊಂಡು ಸಾಲಗಾರರಾಗುವುದರ ಬಗ್ಗೆ ನನಗೆ ಖೇದವಿದೆ ಎಂದು ಕಾಗಿನೆಲೆ ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹೊರಬೀರಪ್ಪನ ಗುಡಿಯಲ್ಲಿ ತಾಲ್ಲೂಕು ಕುರುಬ ನೌಕರರ ಸಂಘ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಶ್ರೀ ಗಳು ಆಶೀರ್ವಚನ ನೀಡುತ್ತಿದ್ದರು.
ದೈವಿಕ ಆಚರಣೆಗಳ ಶ್ರವಣ ಮಾಡುವ ಶ್ರಾವಣ ಮಾಸದಲ್ಲಿ, ಶಿವನ ಆರಾಧನೆಯ ಶಿವರಾತ್ರಿ ಮಾಸದಲ್ಲಿ ಕುರಿ ಕಡಿಯುವ ದುಂದು ವೆಚ್ಚದ ವ್ಯವಸ್ಥೆಯನ್ನು ನಾವು ವಿರೋಧಿಸುತ್ತಲೇ ಬಂದಿದ್ದೇವೆ. ಆದರೆ ಹಿರಿಯರು ನಮ್ಮ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳು ತ್ತಿಲ್ಲ. ಕಾರಣ ನಮ್ಮ ಮಾತಗಳಲ್ಲಿನ ಕಳಕಳಿಯನ್ನು ಇಂದಿನ ಯುವಜನತೆ ಅರಿತು, ಸಮಾಜದ ಬಲಷ್ಠತೆಗೆ ಕೈಜೋ ಡಿಸುವಂತೆ ಶ್ರೀ ಗಳು ಕರೆ ನೀಡಿದರು.
ಕಳೆದ 16 ವರ್ಷಗಳಿಂದ ತಾಲ್ಲೂಕು ಕುರುಬ ನೌಕರರ ಸಂಘ ಸಮಾಜದ ಪ್ರತಿಭೆಗಳನ್ನ ಗುರುತಿಸಿ ಗೌರವಿಸುತ್ತಿದ್ದಾರೆ. ನಾವು ಪ್ರತಿ ಸಭೆ, ಸಮಾರಂಭಗಳಲ್ಲಿ ಸಮಾಜದ ಬಲಿಷ್ಠತೆಗೆ ಪ್ರಯತ್ನಿಸುತ್ತಿದ್ದೇವೆ. ನಮ್ಮ ಜೀವಿತದ ಕೊನೆಯವರೆಗೂ ಅನಾ ಚಾರದ ವ್ಯವಸ್ಥೆಯಿಂದ ಸಮಾಜವನ್ನು ಹೊರತರುವ ಪ್ರಯತ್ನ ಮಾಡುತ್ತೇವೆ ಎಂದು ಶ್ರೀಗಳು ನುಡಿದರು.
ಶಿಕ್ಷಣ ಪ್ರೇಮಿ ಡಾ. ಪ್ರವೀಣ ಖನ್ನೂರ ಹಾಗೂ ದಾವಣಗೆರೆಯ ಇನ್ಸೈಟ್ಸ್ ಸಂಸ್ಥಾಪಕ ಜಿ.ಬಿ.ವಿನಯ್ ಕುಮಾರ್ ಮಾತನಾಡಿ, ಸಮಾಜದ ಯುವಶಕ್ತಿ ಉನ್ನತ ಶಿಕ್ಷಣ ಪಡೆಯುವತ್ತ ದಾಪುಗಾಲು ಹಾಕಬೇಕು. ಸಮಾಜ ಹಾಗೂ ಪಾಲಕರು ಆ ದಿಶೆಯಲ್ಲಿ ಯುವಶಕ್ತಿಗೆ ಹೆಚ್ಚು ಸಹಾಯ, ಸಹಕಾರ ನೀಡಿ ಪ್ರೋತ್ಸಾಹಿಸಬೇಕು ಎಂದರು.
ಸಂಘದ ಅಧ್ಯಕ್ಷ ಸುಭಾಶ್ ಚಂದ್ರ ಕುರುಬರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮಂತ್ರಿ ಆರ್. ಶಂಕರ್, ಮುಖಂಡರುಗಳಾದ ಷಣ್ಮಖಪ್ಪ ಕಂಬಳಿ, ಎಚ್.ಬಿ. ಹನುಮಂತಪ್ಪ, ಎಸ್.ಜಿ.ಕೋಟಿ, ಎಂ.ಡಿ.ದ್ಯಾಮಣ್ಣನವರ, ಮೃತ್ಯುಂಜಯ ಗುದಿಗೇರ, ಶಿವಪ್ಪ ಮೆಡ್ಲೇರಿ, ರಮೇಶ ಎಳೆಹೊಳಿ, ಭರಮಪ್ಪ ಪೂಜಾರ ಮತ್ತಿತರರಿದ್ದರು.