ಅಪರಾಧದ ಮೂಲವೇ ಮಾನಸಿಕ ಒತ್ತಡ : ನ್ಯಾ. ಮಹಾವೀರ ಕರೆಣ್ಣ

ಅಪರಾಧದ ಮೂಲವೇ ಮಾನಸಿಕ ಒತ್ತಡ : ನ್ಯಾ. ಮಹಾವೀರ ಕರೆಣ್ಣ

ಧ.ರಾ.ಮ. ಕಾಲೇಜಿನಲ್ಲಿ ಮಾನಸಿಕ ಆರೋಗ್ಯದ ಮಹತ್ವ ಮತ್ತು ಕಾನೂನು ಅರಿವು ಕಾರ್ಯಕ್ರಮ

ದಾವಣಗೆರೆ, ಅ. 27- ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘ ಹಾಗೂ ಐಕ್ಯೂಎಸಿ, ಧ.ರಾ.ಮ ವಿಜ್ಞಾನ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಬಿಎಸ್ಸಿ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಮಹತ್ವ ಮತ್ತು ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ ಕರೆಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅತಿಯಾದ ಒತ್ತಡದಿಂದ ಕೋಪ, ಕ್ರೋಧ, ಆತಂಕ, ಖಿನ್ನತೆ,  ಭಯ, ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ  ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ, ಯೋಗ, ಧ್ಯಾನ, ಉಸಿರಾಟದ ವ್ಯಾಯಾಮದಿಂದ ಒತ್ತಡ ನಿಯಂತ್ರಣ ಸಾಧಿಸಲು ಸಾಧ್ಯ ಎಂದು ತಿಳಿಸಿದರು,

ಅತಿಯಾದ ಮೊಬೈಲ್ ಬಳಕೆ,  ಸಾಮಾ ಜಿಕ ಜಾಲತಾಣದಿಂದ ವಿದ್ಯಾರ್ಥಿಗಳು ಸಾಧ್ಯ ವಾದಷ್ಟು ದೂರ ಇರಬೇಕು, ಇಲ್ಲವಾದರೆ ಮಾನಸಿಕ ಒತ್ತಡದಿಂದ ಬಳಲುತ್ತೀರಾ ಹಾಗೂ 100 ಜನರಲ್ಲಿ 12 ಜನ ಮಾನಸಿಕ ಸಮಸ್ಯೆ ಗಳಿಂದ ನರಳುತ್ತಿದ್ದಾರೆ ಎಂದು ತಿಳಿಸಿದರು. 

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದಿಂದ ಉಚಿತವಾಗಿ ಕಾನೂನು ನೆರವು – ಅರಿವು ನೀಡುತ್ತಿದ್ದು, ವಾರ್ಷಿಕ 3 ಲಕ್ಷಕ್ಕಿಂತ ಕಡಿಮೆ ಆದಾಯದ ಅಶಕ್ತರು, ಈ ಉಚಿತ ಕಾನೂನು ಸೇವೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು, 

ಕಾನೂನು ಸೇವಾ ಪ್ರಾಧಿಕಾರದ ಮೂಲ ಉದ್ದೇಶ ಬಡವರಿಗೆ, ಅಶಕ್ತರಿಗೆ ಕಾನೂನು ನೆರವನ್ನು ನೀಡುವುದು, ಸಿವಿಲ್ ಹಾಗೂ ರಾಜೀ ಆಗುವಂತಹ ಕೌಟುಂಬಿಕ, ಚೆಕ್ ಬೌನ್ಸ್, ಗಂಭೀರವಲ್ಲದ ಕ್ರಿಮಿನಲ್ ಪ್ರಕರಣಗಳಲ್ಲಿ ಈ ನೆರವು ಸುಲಭವಾಗಿ ಪಡೆಯಬಹುದು ಎಂದು ಮಹಾವೀರ ಕರೆಣ್ಣ ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‌ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಮಾತನಾಡುತ್ತಾ, ಯುವಜನತೆ ಯಾವುದೇ ದುರ್ವ್ಯಸನಕ್ಕೆ ಬೀಳಬಾರದು. ಮಾದಕ ವಸ್ತುಗಳ ಬಗ್ಗೆ ಇರುವ ಕಾನೂನಿನ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಬಿ.ಎಲ್. ಮಂಜುನಾಥ್ ಮತ್ತು ಗೀತಮ್ಮ ಮಂಜುನಾಥ್ ಅವರು ಚಿಕ್ಕ-ಚಿಕ್ಕ ಆಸನಗಳು ಹೇಗೆ ಎಲ್ಲರಿಗೂ ಆರೋಗ್ಯ ತಂದು ಕೊಡುತ್ತವೆ ಎಂಬುದನ್ನು ತಿಳಿಸಿಕೊಟ್ಟರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನಿವೃತ್ತ ಪ್ರಾಂಶುಪಾಲ ಡಾ. ಜೆ.ಬಿ. ರಾಜ್ ಇವರು ಮಾನಸಿಕ ಆರೋಗ್ಯದ ಬಗ್ಗೆ ಅದರ ಸುಲಭ ನಿಯಂತ್ರಣಕ್ಕೆ ಧ್ಯಾನ, ದೀರ್ಘ ಉಸಿರಾಟದ ಕ್ರಮಗಳು, ಅದರ ಮಹತ್ವ ತಿಳಿಸಿದರು.

ಯೋಗ ಗುರು ಮಂಜುನಾಥ್ ಮತ್ತು ಗೀತಮ್ಮ ಯೋಗದ ಮೂಲಕ ಮಾನಸಿಕ ಒತ್ತಡವನ್ನು ಯಾವ ರೀತಿ ನಿಯಂತ್ರಣಕ್ಕೆ ತರಬಹುದು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು. ಪ್ರಾಂಶುಪಾಲರಾದ ಡಾ. ಆರ್. ವನಜಾ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರೀಮತಿ ಎಂ.ಪಿ. ರೂಪಶ್ರೀ, ಕಾರ್ಯಕ್ರಮ ಸಂಚಾಲಕ ಡಾ. ರೋಹಿತ್, ಐಕ್ಯೂಎಸಿ ಸಂಚಾಲಕರಾದ ಡಾ. ರಮ್ಯಕುಮಾರಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!