ಹೃದಯ ವೈಶಾಲ್ಯತೆ ಬೆಳೆಸದ ಧರ್ಮಗಳಿಂದ ಮನುಕುಲದ ಉದ್ಧಾರ ಅಸಾಧ್ಯ

ಹೃದಯ ವೈಶಾಲ್ಯತೆ ಬೆಳೆಸದ ಧರ್ಮಗಳಿಂದ ಮನುಕುಲದ ಉದ್ಧಾರ ಅಸಾಧ್ಯ

ಪ್ರವಾದಿ (ಸ) ಜೀವನ ಸಂದೇಶ ಅಭಿಯಾನ-2023 ವಿಚಾರ ಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ, ಅ. 26- ಹೃದಯ ವೈಶಾಲ್ಯತೆ ಬೆಳೆಸದ ಯಾವ ಧರ್ಮಗಳೂ ಸಹ ಮನುಕುಲವನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ. ಎಲ್ಲಾ ಧರ್ಮಗಳೂ ಸಹ ಶ್ರೇಷ್ಠ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವುದು ಸರ್ವ ಧರ್ಮಗಳ ಉದ್ದೇಶವಾಗಿದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ದಾವಣಗೆರೆ ವತಿಯಿಂದ ಇಂದು ಸಂಜೆ ಹಮ್ಮಿಕೊಂಡಿದ್ದ ಪ್ರವಾದಿ (ಸ) ಜೀವನ ಸಂದೇಶ ಅಭಿಯಾನ-2023 ವಿಚಾರ ಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮನುಷ್ಯ ಬೌದ್ಧಿಕವಾಗಿ ಪಡೆಯುತ್ತಿದ್ದು, ನೈತಿಕವಾಗಿ ಕಳೆದುಕೊಳ್ಳುತ್ತಿದ್ದಾನೆ. ಬೌದ್ಧಿಕ ಮತ್ತು ನೈತಿಕತೆಗಳಿಗೆ ಪೂರಕವಾಗಿ ಧರ್ಮದ ಅರಿವು ಇರಬೇಕಾಗುತ್ತದೆ. ಎಲ್ಲಾ ಧರ್ಮಗಳು ಸಹ ಸತ್ಯ, ಪ್ರೀತಿ, ನ್ಯಾಯ, ಅಹಿಂಸೆಯನ್ನೇ ಬೋಧಿಸುತ್ತವೆ. ಯಾವ ಧರ್ಮಗಳೂ ಸಹ ಕೇಡನ್ನು, ಹಿಂಸೆಯನ್ನು ಬಯಸುವುದಿಲ್ಲ ಎಂದರು.

ಪ್ರಾಣಿ, ಪಕ್ಷಿ, ಗಿಡ, ಮರ, ಪರಿಸರ ಸಂರಕ್ಷಿಸುವ ಮನೋಭಾವನೆಯನ್ನು ರೂಢಿಸಿಕೊಂಡಾಗ ಧರ್ಮದ ಹಾದಿಯಲ್ಲಿ ನಡೆಯಲು ಸಾಧ್ಯ. ಇಲ್ಲದಿದ್ದರೆ ಧರ್ಮದ ಹಾದಿಯಿಂದ ದೂರ ಸರಿಯುತ್ತಾನೆ ಎಂದು ಹೇಳಿದರು.

ಧರ್ಮಾಂಧತೆ ಅಜ್ಞಾನಿಯನ್ನಾಗಿ, ಅವಿವೇಕಿ ಯನ್ನಾಗಿ, ಸಮಾಜಘಾತುಕರನ್ನಾಗಿ ಮಾಡುತ್ತದೆ. ಧರ್ಮಾಂಧತೆಯ ಆಚರಣೆಗಳು ಹೆಚ್ಚಾಗಿ ಅಶಾಂತಿ, ಅನೀತಿ, ಅಧರ್ಮ ಹೆಚ್ಚಾಗುತ್ತಿದ್ದು, ಇವುಗಳಿಂದ ಹೊರಬರಲು ಒಳ್ಳೆಯ ಸಂಸ್ಕಾರ ಮನೆ, ಮಠಗಳು ಮತ್ತು ಸಮಾಜದಿಂದ ಸಿಗಬೇಕು. ಆದರೆ ಅಂತವುಗಳೇ ವ್ಯಾಪಾರಿ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿರುವುದು ವಿಷಾದದ  ಸಂಗತಿ ಎಂದರು.  

ಧರ್ಮದ ಬೇಲಿಯನ್ನು ಸುಟ್ಟು ಹಾಕಿ,  ಅಧರ್ಮದ ಗೋಡೆಯನ್ನು ಕೆಡವಿ, ಬಯಲಲ್ಲಿ ಬಯಲಾಗಿ ಭಾವನೆಗಳು ಒಂದಾಗಿ, ಮಾನವೀಯತೆಯನ್ನು ಮೈಗೂ ಡಿಸಿಕೊಂಡಾಗ ಮಾತ್ರ ಎಲ್ಲರ ಬದುಕು ಸುಂದರವಾಗುತ್ತದೆ ಎಂದು ತಿಳಿಸಿದರು.

ಅರಿವು – ಆಚಾರ, ನಡೆ – ನುಡಿಗಳು ಒಂದಾಗಬೇಕಾಗಿದೆ. ನುಡಿದಂತೆ ನಡೆಯಬೇಕು. ನಡೆದಂತೆ ನುಡಿಯಬೇಕು. ಸದ್ಭಾವನೆಗಳು ಹೆಚ್ಚಾದರೆ ಮನುಷ್ಯ ಹಸನ್ಮುಖಿಯಾಗಿರ ಬಹುದು. ವಿದ್ಯೆ ಕೇವಲ ಸಂಪತ್ತು ಗಳಿಸುವುದಕ್ಕಲ್ಲ, ವಿದ್ಯೆ ತಂದೆ-ತಾಯಿಗಳನ್ನು ಗೌರವಿಸುವಂತಿರಬೇಕು. ಹಿರಿಯರನ್ನು ಆದರಿಸುವಂತಿರಬೇಕು ಎಂದು ಹೇಳಿದರು.

ಕಾಲ, ಭಾಷೆ, ದೇಶ, ಜನರು ಬೇರೆ ಯಾದರೂ ನಂಬಿದ ತತ್ವಗಳು ಸಾರ್ವಕಾಲಿಕ ಸತ್ಯ. ವ್ಯಕ್ತಿ ಬದಲಾದರೆ ಲೋಕ ಬದಲಾಗುತ್ತದೆ. ಸಮಾಜಕ್ಕೆ ಕೊಟ್ಟ ಸಂಸ್ಕಾರ ಬೆಳಕಿನ ಕಡೆ ಕೊಂಡೊಯ್ಯುತ್ತದೆ ಎಂದು ಹಿತ ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಇ್ ಮಾತನಾಡಿ, ಪ್ರಸ್ತುತ ಸಮಾಜಕ್ಕೆ ಮೌಲ್ಯಗಳನ್ನು ಪರಿಚಯಿಸುವ ಅಗತ್ಯವಿದೆ. ಸುಳ್ಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ವಿಭಜಿತ ಸುಳ್ಳು ವಿಜೃಂಭಿಸುವಂತಾಗಿದೆ. ಸತ್ಯವನ್ನು ತಿಳಿಸುವ ಅವತ್ಯವಿದೆ ಎಂದರು.

ಶ್ರೀಮಂತಿಕೆ ಹೆಚ್ಚಾದಂತೆಲ್ಲಾ ಬಡತನ ಹೆಚ್ಚಾಗುತ್ತಿದೆ. ವಿದ್ಯಾವಂತರು ಹೆಚ್ಚಾದಂತೆಲ್ಲಾ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಮೌಲ್ಯರಹಿತ ಸಮಾಜದಲ್ಲಿ ಪ್ರಾಮಾಣಿಕತೆ ಮರುಭೂಮಿಯಂತಾಗಿದೆ ಎಂದು ಹೇಳಿದರು.

ಪ್ರವಾದಿ ಮಹಮ್ಮದರ ಸಂದೇಶ ಯಾವುದೇ ಒಂದು ನಿರ್ದಿಷ್ಟ ಸಮುದಾಯ, ಕಾಲಕ್ಕೆ ಸೀಮಿತವಾದುದಲ್ಲ. ಅದು ಸಾರ್ವತ್ರಿಕವೂ, ಸಾರ್ವಕಾಲಿಕವೂ ಆಗಿದೆ. ಪ್ರವಾದಿ ಮಹಮ್ಮದರು ಅತಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಜಗತ್ತಿನ 200 ಕೋಟಿ ಮುಸಲ್ಮಾನರು ಜೀವಕ್ಕಿಂತ ಹೆಚ್ಚಾಗಿ ಪ್ರವಾದಿ ಮಹಮ್ಮದರನ್ನು ಪ್ರೀತಿಸುತ್ತಾರೆ ಎಂದರು.

ಜಗತ್ತಿನಲ್ಲಿ ದೇವರ ಹೆಸರಿನಲ್ಲಿ ಮೋಸ, ವಂಚನೆ, ಅನ್ಯಾಯಗಳು ನಡೆಯುತ್ತಿವೆ. ಹಗೆತನದ ಧರ್ಮವನ್ನು ಕಾಣುತ್ತಿದ್ದೇವೆ. ಸಮಾಜದ ಚಿಂತಕರ, ಆದರ್ಶ ಪುರುಷರ,  ಸಾಧು-ಸಂತರ ಸಂದೇಶಗಳನ್ನು ಪರಿಚಯಿಸುವ ಅಗತ್ಯ ಇದೆ ಎಂದು ಹೇಳಿದರು. ಬಸವಾದಿ ಶಿವಶರಣರು, ಪ್ರವಾದಿಗಳ ಚಿಂತನೆಗಳಿಂದ ಮೌಲ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದರು.

`ನನ್ನ ಅರಿವಿನ ಪ್ರವಾದಿ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ, ಲೇಖಕ ಯೋಗೇಶ್ ಮಾಸ್ಟರ್, ಅರಿವನ್ನು ವಿಸ್ತರಿಸಿಕೊಂಡು ಎಲ್ಲಾ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕಾಗಿದೆ. ಅರಿವು ಹಂಚಿಕೊಳ್ಳುವ ಹಕ್ಕು-ಕರ್ತವ್ಯ ಹೆಚ್ಚಾಗಬೇಕಾಗಿದೆ ಎಂದು ಹೇಳಿದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಪ್ರವಾದಿ ಮಹಮ್ಮದರು ಜಗತ್ತಿಗೆ ಪೂರಕವಾದ ಸಂದೇಶಗಳನ್ನೇ ಸಾರಿದ್ದಾರೆ. ಶಿಕ್ಷಣಕ್ಕೆ ಮಹತ್ವ ನೀಡಿದವರು, ಮಹಿಳೆಯರಿಗೆ ಹೆಚ್ಚು ಅನುಕೂಲತೆಗಳನ್ನು ಕಲ್ಪಿಸಿದವರು ಎಂದು ತಿಳಿಸಿದರು.

ಇನ್‌ಸೈಟ್ಸ್ ಐಎಎಸ್ ಸಂಸ್ಥಾಪಕ ಹಾಗೂ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್, ಗೃಹರಕ್ಷಕ ದಳ ದಾವಣಗೆರೆ ಸ್ಟ್ಯಾಫ್ ಆಫೀಸರ್ ಕೆ. ಸರಸ್ವತಿ, ವಿಶ್ವ ಮಾನವ ಮಂಟಪ ಸಂಸ್ಥಾಪಕ ಆವರಗೆರೆ ರುದ್ರಮುನಿ, ಶಿಕ್ಷಕ ಎಂ. ಗುರುಸಿದ್ಧಸ್ವಾಮಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೆಗ್ಗೆರೆ ರಂಗಪ್ಪ, ಹೆಚ್. ಮಲ್ಲೇಶ್, ವರ್ತಲ ಕೆ.ಜಾವಿದ್, ದಾದಾಪೀರ್ ನವಿಲೇಹಾಳ್, ಇಮ್ತಿಯಾಜ್ ಬೇಗ್, ಅಬದ್ಸು ಸಲಾಂ, ಮನ್ಸೂರು ಅಹಮದ್ ಮತ್ತಿತರರು  ಉಪಸ್ಥಿತರಿದ್ದರು.

error: Content is protected !!