ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನು ಸದಾ ಸ್ಮರಿಸಬೇಕು

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನು ಸದಾ ಸ್ಮರಿಸಬೇಕು

ಹರಪನಹಳ್ಳಿ : ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯೋತ್ಸವದಲ್ಲಿ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್

ಹರಪನಹಳ್ಳಿ, ಅ.24- ಇತಿಹಾಸವನ್ನು ಯಾರು ಅರಿತು ಕೊಳ್ಳುವುದಿಲ್ಲವೋ, ಅವರು ಏನೂ ಮಾಡಲು ಸಾಧ್ಯವಿಲ್ಲ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಸದಾ ಸ್ಮರಣೆಯಲ್ಲಿರಬೇಕು ಎಂದು ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಹೇಳಿದರು.

ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಸೋಮವಾರ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂದು ಹೋರಾಟದ ಕಿಚ್ಚಿನಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮನ ತ್ಯಾಗ, ಧೈರ್ಯ, ಸಾಹಸ ಸ್ಮರಣೆ ಅಗತ್ಯ. ಹಾಗಾಗಿ ಪ್ರತಿಯೊಬ್ಬರೂ ಭಾರತದ ಸಂಸ್ಕೃತಿ, ಚರಿತ್ರೆಯನ್ನು ಉಳಿಸಿಕೊಳ್ಳುವುದು ಇತಿಹಾಸ ಮಹತ್ವವಾಗಿದೆ. ಇತಿಹಾಸವನ್ನು ಅರಿಯಬೇಕು, ಕಲಿಯಬೇಕು ಎಂದು ಅವರು ಕರೆ ನೀಡಿದರು.

ವೀರಶೈವ ಪಂಚಾಮಸಾಲಿ ಸಮುದಾಯದ ತಾಲ್ಲೂಕು ಅಧ್ಯಕ್ಷ ಪಾಟೀಲ್ ಬೆಟ್ಟನಗೌಡ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪ್ರಥಮ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಆಗಿದ್ದಾರೆ. ಒಗ್ಗಟ್ಟಿನಿಂದ ರಾಜ್ಯವನ್ನು ಉಳಿಸಿಕೊಳ್ಳಲು ನಿರಂತರ ಹೋರಾಟದಲ್ಲಿ ಭಾಗಿಯಾದ ಕಿತ್ತೂರು ರಾಣಿ ಚನ್ನಮ್ಮನ ಪಾತ್ರ ಬಹುಮುಖ್ಯವಾಗಿದೆ. ದೇಶಕ್ಕಾಗಿ ತ್ಯಾಗ ಮಾಡಿದ ಅನೇಕ ಮಹನೀಯರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಸರ್ವ ಜನಾಂಗದವರ ಅಭಿವೃದ್ಧಿಗಾಗಿ ಎಲ್ಲರೂ ಹೋರಾಟ ಮಾಡಿದವರಾಗಿದ್ದು, ಅಂತವರನ್ನು ಸ್ಮರಣೆ ಮಾಡಿದಾಗ ಮಾತ್ರ ಜಯಂತಿಗೆ ಅರ್ಥ ಬರುತ್ತದೆ ಎಂದ ಅವರು, ಅವರ ನಡೆ, ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು. 

ಸಿಆರ್‍ಪಿ ಅಣ್ಣಪ್ಪ ಹಾರಕನಾಳು ಕಿತ್ತೂರು ರಾಣಿ ಚನ್ನಮ್ಮನವರ ಕುರಿತು ವಿಶೇಷ ಉಪನ್ಯಾಸದಲ್ಲಿ ರಾಣಿ ಚನ್ನಮ್ಮನವರು ಸಾಹಸ, ಧೈರ್ಯವನ್ನು ಸಣ್ಣ ವಯಸ್ಸಿನಲ್ಲಿಯೇ ಅಳವಡಿಸಿಕೊಂಡು, ರಾಜ್ಯ ಸುರಕ್ಷಿತವಾಗಿರಬೇಕು ಎಂದರೆ ನೆಮ್ಮದಿಯಿಂದ ಜೀವನ ಮಾಡಬೇಕು. ಅವರ ಜತೆಗೆ ಸಂಗೊಳ್ಳಿ ರಾಯಣ್ಣ, ಬಾಳಪ್ಪನವರೂ ಸಹ ಸಹಕರಿಸಿ, ಕಿತ್ತೂರು ಉಳಿಸಿಕೊಳ್ಳಲು ಹಾಗೂ ದೇಶವನ್ನು ಉಳಿಸಿಕೊಳ್ಳಲು ಹೋರಾಟ ಮಾಡಿದವರ ಧೈರ್ಯ, ಸಾಹಸವನ್ನು ನಮ್ಮ ಜೀವನದಲ್ಲಿ ಬಂದಾಗ ತೋರಿಸಬೇಕು. ಇವರ ವಿಚಾರಧಾರೆಗಳನ್ನು ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸಬೇಕು ಎಂದರು.

ಸಮುದಾಯದ ಹಿರಿಯ ಮುಖಂಡ ವೀರಣ್ಣ ಕುಂಚೂರು ಹಾಗೂ ಪೂಜಾರ ಬಸವರಾಜ ಮತ್ತು ಮುಖಂಡರು ಶೀಘ್ರವೇ ಪಟ್ಟಣದಲ್ಲಿನ ಪ್ರಮುಖ ವೃತ್ತಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮನವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಎಸಿಯವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗಿರೀಶ್‌ಬಾಬು, ಗ್ರೇಡ್ 2 ತಹಶೀಲ್ದಾರ್‌ ನಟರಾಜ್‌, ತಾಲ್ಲೂಕು ಪಂಚಮಸಾಲಿ ಮುಖಂಡರಾದ ಆರುಂಡಿ ನಾಗರಾಜ್‌, ಎ.ಜಿ.ಮಂಜುನಾಥ್‌, ಕುಸುಮಾ ಜಗದೀಶ, ಚನ್ನನಗೌಡ, ಓಂಕಾರಗೌಡ, ಎಸ್.ಸುರೇಶ್, ಉಮಾ, ಶ್ರೀಮತಿ ಕೊಟ್ರೇಶ್ ಬಾಗಳಿ ಕೊಟ್ರೇಶಪ್ಪ, ಪುಷ್ಪಾ ದಿವಾಕರ್‌, ಈರಣ್ಣ, ಬಸವರಾಜ, ಕಂದಾಯ ಅಧಿಕಾರಿಗಳಾದ ವಸಂತ ಪಾಟೀಲ್, ರಾಘವೇಂದ್ರ, ಶಶಿಕುಮಾರ್‌, ಸುರೇಶ ಬೆಂಡಿಗೇರಿ, ಎನ್.ಮಂಜುನಾಥ್‌, ಪಂಪಣ್ಣ ಇತರರು ಇದ್ದರು.

error: Content is protected !!