ಮಲೇಬೆನ್ನೂರಿನಲ್ಲಿ ಸಂಭ್ರಮದ ವಿಜಯದಶಮಿ

ಮಲೇಬೆನ್ನೂರಿನಲ್ಲಿ ಸಂಭ್ರಮದ ವಿಜಯದಶಮಿ

ಮಲೇಬೆನ್ನೂರು, ಅ.24- ಪಟ್ಟಣದ ಗ್ರಾಮದೇವತೆ ಶ್ರೀ ಏಕನಾಥೇಶ್ವರಿ ದೇವಸ್ಥಾನದ ಆವಣದಲ್ಲಿರುವ ಬನ್ನಿಕಟ್ಟೆ ಯಲ್ಲಿ ಮಂಗಳವಾರ ಸಂಜೆ ಅಂಬುಛೇದನ ಮಾಡುವ ಮೂಲಕ ಗ್ರಾಮಸ್ಥರು ಸಾಮೂಹಿಕವಾಗಿ ಬನ್ನಿ ಮುಡಿದು ನಾಡಹಬ್ಬ ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸಿದರು.

ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ನಂತರ ರೈತರು ಜೋಳದ ದಂಟನ್ನು ಸಮರ್ಪಿಸಿದರು. ನಂತರ ಶ್ರೀ ಬಸವೇಶ್ವರ, ಶ್ರೀ ಬೀರಲಿಂಗೇಶ್ವರ, ಶ್ರೀ ಜೋಡಿ ಆಂಜನೇಯ, ಶ್ರೀ ದುರ್ಗಾಂಬಿಕೆ ಸೇರಿದಂತೆ ಪಟ್ಟಣದ ಎಲ್ಲಾ ದೇವರುಗಳ ಮೆರವಣಿಗೆ ರಾಜ ಬೀದಿಗಳಲ್ಲಿ ಜರುಗಿತು. 

ವಿಜಯದಶಮಿ ಅಂಗವಾಗಿ ಏಕನಾಥೇಶ್ವರಿ ದೇವಸ್ಥಾನದ ಆವರಣದಲ್ಲಿ ಶ್ರೀ ಬೀರಲಿಂಗೇಶ್ವರ ಕಾರಣಿಕ ನಡೆಯಿತು. `ಬಂಗಾರದ ಕಳಸಕ್ಕೆ ಮುತ್ತಿನ ಹಾರ ಹಾಕಿತಲೇ ಅದಕ್ಕೆ ನಾ ಅದನಿ’ ಎಂದು ಪೂಜಾರಪ್ಪ ಕಾರಣಿಕ ನುಡಿದರು.

ಇದೇ ವೇಳೆ ಶ್ರೀ ಬೀರಲಿಂಗೇಶ್ವರ ದೇವರ ಮರಿ ಬನ್ನಿ ಮಹೋತ್ಸವವು ಎಲ್ಲಾ ದೇವರುಗಳ ಸಮ್ಮುಖದಲ್ಲಿ ಬೀರಪ್ಪನ ಹೊರಗುಡಿ ಹತ್ತಿರ ಜರುಗಿತು.

ನಂತರ ಎಲ್ಲಾ ದೇವರುಗಳು ಬೀರ ಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದು, ದೊಡ್ಡ ಎಡೆ ಜಾತ್ರೆ ಮುಗಿಸಿಕೊಂಡು ತಮ್ಮ ತಮ್ಮ ದೇವಸ್ಥಾನಗಳಿಗೆ ತೆರಳಲಿವೆ.

ದೊಡ್ಡ ಎಡೆ ಜಾತ್ರೆ : ವಿಜಯದಶಮಿ ಪ್ರಯುಕ್ತ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ದೊಡ್ಡ ಎಡೆ ಜಾತ್ರೆಯು ಇದೇ ದಿನಾಂಕ 29ರ ಭಾನುವಾರ ನಡೆಯಲಿದೆ. ದಿನಾಂಕ 28ರ ಶನಿವಾರ ಸಂಜೆ 7 ರಿಂದ 9 ಗಂಟೆವರೆಗೆ ಶ್ರೀ ಕಾಳಿಕಾ ಹೋಮವನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಕಾರ್ಯದರ್ಶಿ ಕೆ.ಪಿ.ಗಂಗಾಧರ್ ತಿಳಿಸಿದ್ದಾರೆ.

error: Content is protected !!