ಕಾರ್ಪೊರೇಟ್ ವಲಯಕ್ಕೆ ಬೇಕು ಭಕ್ತಿ, ಯುಕ್ತಿ , ಶಕ್ತಿ
ಕಾಲೇಜಿನ ಕ್ಯಾಂಪಸ್ಗಳಿಂದ ಕಾರ್ಪೊರೇಟ್ ವಲಯಕ್ಕೆ ಬರುವವರು ವಿಶ್ಲೇಷಣಾತ್ಮಕ ಚಿಂತನೆ, ಭಾವನಾತ್ಮಕ ಬುದ್ಧಿವಂತಿಕೆ ಹಾಗೂ ಕಾಯಕವೇ ಕೈಲಾಸ ಎಂಬ ಭಾವನೆ ಹೊಂದಿರಬೇಕು ಎಂದು ಶಿಕ್ಷಣ ತಜ್ಞ ಪಿ.ಬಿ. ಕೋಟೂರ ಹೇಳಿದರು.
ಈ ಮೂರು ಗುಣಗಳನ್ನು ಭಕ್ತಿ, ಯುಕ್ತಿ ಹಾಗೂ ಶಕ್ತಿ ಎಂಬ ಸೂತ್ರಕ್ಕೆ ಹೋಲಿಸಬಹುದು. ಈ ಮೂರೂ ಸೇರಿದಾಗ ಕಾರ್ಪೊರೇಟ್ ವಲಯದಲ್ಲಿ ಯಶಸ್ಸು ಸಿಗುತ್ತದೆ ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ರಿಜಿಸ್ಟ್ರಾರ್ ಬಿ.ಇ. ರಂಗಸ್ವಾಮಿ
ದಾವಣಗೆರೆ, ಅ. 24 – ಕೃಷಿ, ಕಂಪ್ಯೂಟರ್, ಸಂಪರ್ಕ, ರಕ್ಷಣೆ, ಇ – ಆಡಳಿತ, ಇ – ವಾಣಿಜ್ಯ, ಇಂಧನ, ಶಿಕ್ಷಣ, ಸಾರಿಗೆ ಹಾಗೂ ಆರೋಗ್ಯ ಎಂಬ ಹತ್ತು ವಲಯಗಳಲ್ಲಿ ಕ್ರಾಂತಿಕಾರಕ ಪ್ರಗತಿ ಆದಾಗ ಮಾತ್ರ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಸಾಧ್ಯ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಬಿ.ಇ. ರಂಗಸ್ವಾಮಿ ತಿಳಿಸಿದರು.
ನಗರದ ಬಿ.ಐ.ಇ.ಟಿ. ಕಾಲೇಜಿನಲ್ಲಿ ಮೊನ್ನೆ ಆಯೋಜಿಸಲಾಗಿದ್ದ 41ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಭಾರತದ ತಲಾ ವರಮಾನ ವರ್ಷಕ್ಕೆ 2,400 ಡಾಲರ್ ಆಗಿದ್ದು, ಮಧ್ಯಮ ಆದಾಯ ಮಟ್ಟದಲ್ಲಿದೆ. ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಪಾಕಿಸ್ತಾನಗಳೂ ಇದೇ ಮಟ್ಟದಲ್ಲಿವೆ.
ಈ ಹಂತದಿಂದ ಮೇಲೆದ್ದು ಅಭಿವೃದ್ಧಿ ಹೊಂದಿದ ದೇಶವಾಗಬೇಕಾದರೆ ತಲಾ ವರಮಾನ ಈಗಿನದಕ್ಕಿಂತ ಎಂಟು ಪಟ್ಟು ಹೆಚ್ಚಬೇಕಿದೆ ಎಂದು ಹೇಳಿದರು.
ವೇಗದ ಅಂತರ್ಜಾಲದಿಂದ ಹಿಡಿದು ಸರಕು ಸಾಗಣೆಯವರೆಗೆ, ಪೌಷ್ಟಿಕ ಆಹಾರದಿಂದ ತ್ವರಿತ ಸರಕು ಸಾಗಣೆಯವರೆಗೆ, ಹೈಡ್ರೋಜನ್ ಇಂಧನ ಬಳಕೆಯಿಂದ ರಕ್ಷಣಾ ಸ್ವಾವಲಂಬನೆಯವರೆಗೆ ಎಲ್ಲ ವಲಯಗಳಲ್ಲಿ ಕ್ರಾಂತಿಕಾರಕ ಬದಲಾವಣೆ ಆದಾಗ ಮಾತ್ರ ಭಾರತ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗುವ ಕನಸು ನನಸಾಗಲು ಸಾಧ್ಯ ಎಂದು ರಂಗಸ್ವಾಮಿ ಹೇಳಿದರು.
ಈ ಎಲ್ಲ ಸಾಧನೆಗಳನ್ನು ಸಾಕಾರಗೊಳಿಸಲು ಇರುವ ಶಕ್ತಿ ಸೂತ್ರ ಎಂದರೆ ಶಿಕ್ಷಣ ಮಾತ್ರ. ಪದವಿ ಶಿಕ್ಷಣದ ಅಂತ್ಯವಲ್ಲ, ಅದು ಆರಂಭ ಮಾತ್ರ. ನಿರಂತರ ಕಲಿಕೆಯೇ ನಿಜವಾದ ಶಿಕ್ಷಣ. ಅಂತಹ ಶಿಕ್ಷಣದಿಂದ ಭಾರತದ ಬೆಳವಣಿಗೆಗೆ ಅಗತ್ಯವಾದ ತಂತ್ರಜ್ಞಾನ ಒದಗಿಸಿ ಎಂದವರು ಇಂಜಿನಿಯರಿಂಗ್ ಪದವೀಧರರಿಗೆ ಕರೆ ನೀಡಿದರು.
ಭಾರತ ಈಗ ಅಗತ್ಯವಾದ ಇಂಧನದಲ್ಲಿ ಶೇ.85ರಷ್ಟನ್ನು ಹಾಗೂ ಖಾದ್ಯ ತೈಲದಲ್ಲಿ ಶೇ.60ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ರಕ್ಷಣಾ ವಲಯದಲ್ಲೂ ಆಮದು ಅವಲಂಬನೆ ಹೆಚ್ಚಾಗಿದೆ. ಕೌಶಲ್ಯದ ಕೊರತೆ ಇದೆ. ಈ ಎಲ್ಲ ಸಮಸ್ಯೆಗಳನ್ನು ತಂತ್ರಜ್ಞಾನದ ಮೂಲಕ ನೀಗಿಸಿಕೊಳ್ಳಬೇಕಿದೆ ಎಂದವರು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಲೇಖಕ ಹಾಗೂ ಶಿಕ್ಷಣ ತಜ್ಞ ಪಿ.ಬಿ. ಕೋಟೂರ, ಡಿಜಿಟಲ್ ತಂತ್ರಜ್ಞಾನದಲ್ಲಿ ಭಾರತ ಕ್ರಾಂತಿಯನ್ನೇ ಕಂಡಿದೆ. ಒಂದೇ ತಿಂಗಳಲ್ಲಿ ಭಾರತದಲ್ಲಿ 10 ಶತಕೋಟಿ ವಹಿವಾಟುಗಳು ನಡೆದಿವೆ. ಇದು ಅಭಿವೃದ್ಧಿ ಹೊಂದಿದ ಮೊದಲ ನಾಲ್ಕು ದೇಶಗಳ ಒಂದು ವರ್ಷದ ವಹಿವಾಟಿಗೆ ಸಮ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಂಕ್ ವಿಜೇತರು, ಬಂಗಾರದ ಪದಕ ವಿಜೇತರು ಹಾಗೂ ಪ್ರಥಮ ಸ್ಥಾನ ಪಡೆದವರನ್ನು ಸನ್ಮಾನಿಸಲಾಯಿತು.
ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ್ ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು.
ಎಸ್.ಬಿ. ಮಲ್ಲಿಕಾರ್ಜುನ ಸ್ವಾಗತಿಸಿದರು. ಎಂ. ವರ್ಷ ಹಾಗೂ ಎಸ್.ಪಿ. ಪುನೀತ್ ನಿರೂಪಿಸಿದರು.