ಕುಡಿತ ಬಿಡುವುದರಿಂದ ಕುಟುಂಬಕ್ಕೆ ಇನ್ನಿಲ್ಲದ ಆನಂದ

ಕುಡಿತ ಬಿಡುವುದರಿಂದ ಕುಟುಂಬಕ್ಕೆ ಇನ್ನಿಲ್ಲದ ಆನಂದ

ಮಲೇಬೆನ್ನೂರು, ಅ.20- ಮದ್ಯವರ್ಜನೆ ಶಿಬಿರದ ಯಶಸ್ಸಿಗೆ ಶ್ರಮಿಸಿದವರ ಶ್ರಮ ಸಾರ್ಥಕವಾಗಬೇಕಾದರೆ, ಇಲ್ಲಿ ಬಂದಿರುವ 60 ಶಿಬಿರಾರ್ಥಿಗಳು ಇನ್ನೆಂದೂ ದುಶ್ಚಟಗಳ ಕಡೆಗೆ ತಿರುಗಿಯೂ ನೋಡಬಾರದೆಂದು 1745ನೇ ಮದ್ಯವರ್ಜನೆ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ಎಸ್.ಸೋಮಶೇಖರ್ ಮನವಿ ಮಾಡಿದರು.

ಕೂಲಂಬಿಯ ಶ್ರೀ ಗುರು ಗದ್ದಿಗೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿರುವ 1745ನೇ ಮದ್ಯವರ್ಜನೆ ಶಿಬಿರದ 7ನೇ ದಿನವಾದ ಶುಕ್ರವಾರ ಸಂಜೆ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದುಶ್ಚಟಗಳಿಗೆ ಒಳಗಾಗಿ ಬದುಕನ್ನು ಹಾಳು ಮಾಡಿಕೊಂಡಿರುವ ಜನರನ್ನು ಅವುಗಳಿಂದ ಮುಕ್ತಿಗೊಳಿಸಿ, ಹೊಸ ಜೀವನಕ್ಕೆ ಕರೆತರುವ ಡಾ. ವೀರೇಂದ್ರ ಹೆಗ್ಗಡೆ ಅವರ ಈ ಪ್ರಯತ್ನ ನಿಜಕ್ಕೂ ಮಾದರಿ ಎಂದು ಶ್ಲ್ಯಾಘಿಸಿದರು.

ಶಿಬಿರದ ಗೌರವಾಧ್ಯಕ್ಷ ಜಿ.ಶಂಕರಮೂರ್ತಿ ಮಾತನಾಡಿ, ಸಮಾಜದಲ್ಲಿ ಕುಡುಕ ಎಂಬ ಅಣಿಪಟ್ಟಿ ಕಟ್ಟಿಕೊಂಡು ಬದುಕುವುದು ಎಷ್ಟು ಕಷ್ಟ ಎಂಬುದು ಅನುಭವಿಸಿದವರಿಗೆ ಮಾತ್ರ ಗೊತ್ತಿದೆ. ಆ ಹಣೆಪಟ್ಟಿ ತೆಗೆದು ಹಾಕಿ,
ಸಮಾಜದ ನಿಮ್ಮ ಗೌರವ ಉಳಿಸಿಕೊಂಡು ಕುಡಿತದಿಂದ ಹೊರಬರುವುದು ಅನಿವಾರ್ಯ ಎಂದರು.

ಇತ್ತೀಚೆಗೆ ಕೊಮಾರನಹಳ್ಳಿಯಲ್ಲಿ ಜರುಗಿದ 1705ನೇ ಮದ್ಯವರ್ಜನೆ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ಮಂಜುನಾಥ್ ಪಟೇಲ್ ಮಾತನಾಡಿ, ನೀವು ಕುಡಿತ ಬಿಡುವುದರಿಂದ ನಿಮ್ಮ ಆರೋಗ್ಯ ಹಾಗೂ ಸಮಾಜದಲ್ಲಿ ನಿಮ್ಮನ್ನು ನೋಡುವ ದೃಷ್ಟಿಕೋನ ಬೇರೆ ಆಗುವುದರ ಜೊತೆಗೆ ನಿಮ್ಮ ಕುಟುಂಬದವರಲ್ಲಿ ಇನ್ನಿಲ್ಲದ ಆನಂದ ಉಂಟಾಗುತ್ತದೆ ಎಂದರು.

ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ ಮಾತನಾಡಿ, ಇಷ್ಟು ಚಿಕ್ಕ ವಯಸ್ಸಿನ ಮಕ್ಕಳು ದುಶ್ಚಟಗಳಿಗೆ ಒಳಗಾಗಿರುವುದನ್ನು ನೋಡಿ ತುಂಬಾ ದುಃಖವಾಗುತ್ತದೆ ಎಂದು ಕಣ್ಣೀರು ಹಾಕಿದರು.

ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ನಾಗರಾಜ್ ಕುಲಾಲ್, ಬಸವಾಪಟ್ಟಣ ಯೋಜನಾಧಿಕಾರಿ ಎನ್.ನವೀನ್, ಕುಂದೂರು ವಲಯ ಮೇಲ್ವಿಚಾರಕಿ ಶ್ರೀಮತಿ ಪಲ್ಲವಿ, ಸಹಶಿಬಿರಾಧಿಕಾರಿ ರುದ್ರಪ್ಪ, ಆರೋಗ್ಯ ಸಹಾಯಕಿ ಶ್ರೀಮತಿ ನೇತ್ರಾವತಿ ಮಾತನಾಡಿದರು.

ಶ್ರೀ ಗುರು ಗದ್ದಿಗೇಶ್ವರ ಕಮಿಟಿ ಕಾರ್ಯದರ್ಶಿ ವೈ.ಎಂ.ಬಸವಲಿಂಗಪ್ಪ, ಗ್ರಾ.ಪಂ. ಅಧ್ಯಕ್ಷ ಕೆ.ಜೆ.ರೇವಣಸಿದ್ದಪ್ಪ, ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಜಿ.ಹೆಚ್.ಹೇಮಂತ್‌ರಾಜ್, ಗ್ರಾಮದ ಮುಖಂಡ ಕೆ.ಬಿ.ಬಸವರಾಜಪ್ಪ, ರೈಸ್ ಮಿಲ್ ಮಾಲೀಕ ಯಕ್ಕನಹಳ್ಳಿ ಬಸವರಾಜಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಜಿ.ಬಿ.ಯೋಗೇಶ್, ಜಿಗಳಿ ಪ್ರಕಾಶ್, ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ, ಕೂಲಂಬಿ ಒಕ್ಕೂಟದ ಅಧ್ಯಕ್ಷ ಗದಿಗೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಸಮಾರೋಪ : ಮದ್ಯವರ್ಜನೆ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 21ರ ಶನಿವಾರ ಬೆಳಿಗ್ಗೆ 11.30ಕ್ಕೆ ಸಾಣೇಹಳ್ಳಿ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಜರುಗಲಿದೆ.

error: Content is protected !!