ದಾವಣಗೆರೆ, ಅ. 18- ಭದ್ರಾ ನಾಲೆಗೆ ನಿರಂತರವಾಗಿ ನೀರು ಹರಿಸುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆ, ಈ ಸಂಬಂಧ ಹಲವರಿಗೆ ಮಾಡಿಕೊಂಡ ಮನವಿಗೆ ಸ್ಪಂದಿಸದೇ ನೀರು ನಿಲುಗಡೆ ಮಾಡಿರುವುದು ಖಂಡನೀಯ ಎಂದು ರೈತ ಒಕ್ಕೂಟದ ಮುಖಂಡ ಬಿ.ಎಂ. ಸತೀಶ್ ಕೊಳೇನಹಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭದ್ರಾ ನಾಲೆಗೆ ಸತತ ನೂರು ದಿನಗಳ ಕಾಲ ನೀರು ಹರಿಸಬೇಕೆಂದು ಜಲಸಂಪನ್ಮೂಲ ಸಚಿವರೂ, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಐಸಿಸಿ ಅಧ್ಯಕ್ಷರೂ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರಲ್ಲಿ ಮನವಿ ಮಾಡಿದಾಗ ದಾವಣಗೆರೆ ಜಿಲ್ಲೆಯ ರೈತರ ಹಿತಾಸಕ್ತಿಗೆ ಅನುಗುಣವಾಗಿ ನೀರು ಹರಿಸುವ ಭರವಸೆ ನೀಡಿದ್ದರು. ಆದರೆ ನಾಲೆಗೆ ಆ. 16 ರಿಂದಲೇ ನೀರು ನಿಲ್ಲಿಸಿರುವುದರಿಂದ 1.40 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುವ ರೈತರಿಗೆ ಅನಾನುಕೂಲವಾಗಿದೆ ಎಂದರು.
ಈ ಕೂಡಲೇ ಆನ್ ಅಂಡ್ ಆಫ್ ಪದ್ಧತಿ ನಿಲ್ಲಿಸಿ, ನಿರಂತರವಾಗಿ ನೀರು ಹರಿಸಬೇಕೆಂದು ಒತ್ತಾಯಿಸಿದರು. ಜಿಲ್ಲೆಯ ಉಸ್ತುವಾರಿ ಸಚಿವರೂ ಸೇರಿದಂತೆ ಜನಪ್ರತಿನಿಧಿಗಳು ರೈತರ ಹಿತಾಸಕ್ತಿ ಕಾಪಾಡುವಲ್ಲಿ ತೀವ್ರ ವಿಫಲರಾಗಿದ್ದಾರೆ. ಐಸಿಸಿ ತೀರ್ಮಾನದಂತೆ ನಾಲೆಯಲ್ಲಿ ನೀರು ಹರಿಸುವ ಭರವಸೆ ಕೂಡ ಈಡೇರಿಲ್ಲ ಎಂದು ತಿಳಿಸಿದರು.
ರೈತರ ಒಕ್ಕೂಟ, ಭಾರತೀಯ ರೈತ ಒಕ್ಕೂಟದ ಪದಾಧಿಕಾರಿಗಳಾದ ಹೆಚ್.ಆರ್. ಲಿಂಗರಾಜ್ ಶಾಮನೂರು, ಬಿ.ನಾಗೇಶ್ವರರಾವ್ ಬೆಳವನೂರು, ಕಲ್ಲುಬಂಡೆ ಪ್ರಸಾದ್, ಪುಟರಾಜ್ ಉಪಸ್ಥಿತರಿದ್ದರು.