ರಾಜ್ಯ ಸರ್ಕಾರದ ದುರಾಡಳಿತ ಖಂಡಿಸಿ ಪ್ರತಿಭಟನೆ

ರಾಜ್ಯ ಸರ್ಕಾರದ ದುರಾಡಳಿತ ಖಂಡಿಸಿ ಪ್ರತಿಭಟನೆ

ಹರಪನಹಳ್ಳಿ, ಅ.17- ರಾಜ್ಯ ದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾ ಚಾರದ ಆಡಳಿತ ನಡೆಸುತ್ತಿದ್ದು, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ತಾಲ್ಲೂಕು ಬಿಜೆಪಿ ಮಂಡಲದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಗಿರೀಶ್‌ಬಾಬು ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಗೆ ಆಗಮಿಸಿ ಭಾರತೀಯ ಜನತಾ ಪಾರ್ಟಿ ಮಂಡಲದ  ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಕೆಲವೇ ತಿಂಗಳುಗಳು ಆಗಿವೆ. ಸರ್ಕಾರದಲ್ಲಿ ಭ್ರಷ್ಟಾಚಾರ, ದಬ್ಬಾಳಿಕೆ, ಕಾನೂನು ಅವ್ಯವಸ್ಥೆ, ದುರಾಡಳಿತ ಅತಿಯಾಗಿ ರಾಜ್ಯದ ಜನತೆ ರೋಸಿ ಹೋಗಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರಿನಲ್ಲಿ ಇತ್ತೀಚೆಗೆ ಅಂಬಿಕಾಪತಿ ಎಂಬ ಗುತ್ತಿಗೆದಾರನ ಮನೆಯಲ್ಲಿ 42 ಕೋಟಿ ನಗದು ಹಣ ಐಟಿ ದಾಳಿಯಲ್ಲಿ ಸಿಕ್ಕಿದ್ದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಈ ಹಣ ಕಮೀಷನ್ ರೂಪದಲ್ಲಿ ಬಂದಿರುವ ಹಣವಾಗಿದೆ ಎನ್ನುವುದು ದಟ್ಟವಾದ ಸುದ್ದಿಯಾಗಿದೆ. ಇದಲ್ಲದೆ ಸಾವಿರಾರು ಕೋಟಿ ಹಣ ಸಂಗ್ರಹ ಮಾಡಿ ಪಂಚರಾಜ್ಯ ಚುನಾವಣೆಯ ಕಾಂಗ್ರೆಸ್ ಖರ್ಚಿಗೆ ಕಲೆಕ್ಷನ್ ಮಾಡಲಾಗುತ್ತಿದೆ ಎಂಬ ವಿಷಯ ಭಾರೀ ಚರ್ಚೆಯಲ್ಲಿದೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಆಗಿದೆ ಹಾಗೂ ಕಮೀಷನ್ ಕೇಂದ್ರವಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಬರಕ್ಕೆ ತುತ್ತಾಗಿರುವ ರೈತರಿಗೆ ಪರಿಹಾರ ನೀಡಿಲ್ಲ, ವಿದ್ಯುತ್ ಕಡಿತ ವಿಪರೀತ ವಾಗಿದೆ, ವರ್ಗಾವಣೆ ದಂಧೆ ನಡೆಯುತ್ತಿದೆ. ತುಷ್ಠೀಕರಣದಲ್ಲಿ ಸರ್ಕಾರ ಮುಳುಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎಟಿಎಂ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡಲೇ ರಾಜಿನಾಮೆ ನೀಡುವಂತೆ ಭಾರತೀಯ ಜನತಾ ಪಾರ್ಟಿ ತಾಲ್ಲೂಕು ಮಂಡಲ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಾಗಳಿ ಕೊಟ್ರೇಶಪ್ಪ, ಸಾರಿಗೆ ಮಾಜಿ ನಿರ್ದೇಶಕ ಆರುಂಡಿ ನಾಗರಾಜ, ಮಂಡಲ ಪ್ರಧಾನ ಕಾರ್ಯದರ್ಶಿ ಮುದುಕವ್ವನವರ ಶಂಕರ್, ಉದಯಕುಮಾರ್, ಯಲ್ಲಪ್ಪ, ಬಣಕಾರ ಜಗದೀಶ್, ಕುಸುಮಾ, ರೇಖಮ್ಮ, ಮಾರಪ್ಪ, ಜಟ್ಟೆಪ್ಪ ಸೇರಿದಂತೆ ಇತರರು ಇದ್ದರು.

error: Content is protected !!