ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಬಿ.ಪಿ. ಹರೀಶ್‌ ಭೇಟಿ

ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಬಿ.ಪಿ. ಹರೀಶ್‌ ಭೇಟಿ

ಮಲೇಬೆನ್ನೂರು, ಅ. 17- ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೋಮವಾರ  ಶಾಸಕ ಬಿ.ಪಿ. ಹರೀಶ್‌ ದಿಢೀರ್ ಭೇಟಿ ನೀಡಿ ಕುಂದು-ಕೊರತೆ ಪರಿಶೀಲಿಸಿದರು. ಜ್ವರ ಬಾಧೆಗೆ ಒಳಗಾಗಿರುವ  ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಜ್ವರ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಔಷಧಿ ಕೊರತೆ ಇಲ್ಲ ಎಂದು ಕರ್ತವ್ಯ ವೈದ್ಯಾಧಿಕಾರಿ ಡಾ.ಲಕ್ಷ್ಮೀದೇವಿ ಮಾಹಿತಿ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಹೆರಿಗೆ ಮಾಡಿಸಲಾಗುತ್ತಿದೆ. ಸಿಜೇರಿಯನ್‌ ಹೆರಿಗೆ ಅವಶ್ಯಕತೆ ಇರುವವರಿಗೆ ಹರಿಹರ ಅಥವಾ ದಾವಣಗೆರೆಗೆ ಕಳುಹಿಸಲಾಗುತ್ತಿದೆ.

ತುರ್ತು ಚಿಕಿತ್ಸಾ ಘಟಕಕ್ಕೆ ಕೊಠಡಿಯ ಅಗತ್ಯವಿದೆ.    ಈಗ 30 ಬೆಡ್ ವ್ಯವಸ್ಥೆ ಇದ್ದು, 70 ಬೆಡ್‌ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆ ನೆನೆಗುದಿಗೆ ಬಿದ್ದಿದೆ. ಚುಚ್ಚುಮದ್ದು ಕೊಠಡಿ ಅವಶ್ಯಕತೆ ಇದೆ. ಔಷಧಿ ವಿತರಕ, ಮಕ್ಕ ಳು ಹಾಗೂ ಪ್ರಸೂತಿ ವೈದ್ಯರ ಹುದ್ದೆ ಖಾಲಿ ಇದೆ ಎಂದು ಡಾ. ಲಕ್ಷ್ಮೀದೇವಿ ಶಾಸಕರಿಗೆ ತಿಳಿಸಿದರು.    

ಆಸ್ಪತ್ರೆಯ ಶೌಚಾಲಯ, ಶವಾಗಾರಕ್ಕೆ ಭೇಟಿ ನೀಡಿದರು. ನಿವೇಶನ ನೀಡಿದರೆ ಪುರಸಭೆಯಿಂದ ಸುಲಭ್‌ ಶೌಚಾಲಯ ನಿರ್ಮಿ ಸಿಕೊಡುತ್ತೇವೆ ಎಂದು ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್‌ ಮಾಹಿತಿ ನೀಡಿ ದರು. ಅ. 21 ರಂದು ಆರೋಗ್ಯ ರಕ್ಷಾ ಸಮಿತಿ ಸಭೆ ಕರೆಯುವಂತೆ ಶಾಸಕರು ಸೂಚಿಸಿದರು.

ಪರಿಸರ ಎಂಜಿನಿಯರ್‌ ಉಮೇಶ್,‌ ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬಿ. ಮಂಜುನಾಥ್‌, ಭಾನುವಳ್ಳಿ ಸುರೇಶ್‌, ಮಾಜಿ ಸದಸ್ಯರಾದ ಪಿ. ಆರ್. ರಾಜು, ಎ.ಕೆ. ಲೋಕೇಶ್, ಪಾಳೇಗಾರ್‌ ನಾಗರಾಜ್, ಭೋವಿ ಮಂಜಣ್ಣ, ನ್ಯಾಯಬೆಲೆ ಅಂಗಡಿ ಮಂಜಣ್ಣ ಮತ್ತಿತರರು ಈ ವೇಳೆ ಹಾಜರಿದ್ದರು. 

ನಿರ್ಧಾರ ಆಗಿಲ್ಲ : ಭದ್ರಾ ಕಾಲುವೆಗೆ ನೀರು ಹರಿಸುವ ವಿಚಾರ ನಿರ್ಧಾರ ಆಗಿದೆಯಾ? ಎಂದು ರೈತರು ಶಾಸಕರಿಗೆ ಪ್ರಶ್ನಿಸಿದರು. ಈವರೆಗೂ ನೀರಾವರಿ ಸಚಿವ ಡಿ.ಕೆ.‌ ಶಿವಕುಮಾರ್, ಭದ್ರಾ ಕಾಡಾ ಅಧ್ಯಕ್ಷರೂ ಆದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಂದ ನಿರ್ಧಾರ ಹೊರಬಿದ್ದಿಲ್ಲ. ಅಚ್ಚುಕಟ್ಟು ವ್ಯಾಪ್ತಿಯ ಭತ್ತ ಬೆಳೆದ ರೈತರು ಆತಂಕದಲ್ಲಿದ್ದಾರೆ. ನಿರ್ಧಾರಕ್ಕೆ ಕಾದು ನೋಡೋಣ ಎಂದು ಹರೀಶ್ ಹೇಳಿದರು.

error: Content is protected !!