ಭದ್ರಾ ಬಲದಂಡೆ ನಾಲೆ ನೀರು ಬಂದ್‌ 7 ದಿನಗಳ ನಂತರ ನೀರು ಸಾಧ್ಯತೆ

ಭದ್ರಾ ಬಲದಂಡೆ ನಾಲೆ ನೀರು ಬಂದ್‌ 7 ದಿನಗಳ ನಂತರ ನೀರು ಸಾಧ್ಯತೆ

ಮಲೇಬೆನ್ನೂರು, ಅ.17- ಭದ್ರಾ ಜಲಾ ಶಯದಿಂದ ಬಲದಂಡೆ ನಾಲೆಗೆ ಹರಿಸುತ್ತಿದ್ದ ನೀರನ್ನು ಮಂಗಳವಾರ ಸಂಜೆ 6 ಗಂಟೆಗೆ ಬಂದ್‌ ಮಾಡಲಾಗಿದೆ. 

ಮೂಲಗಳ ಪ್ರಕಾರ ಮಂಗಳವಾರದಿಂದ ಅ.23 ರವರೆಗೆ 7 ದಿನ ನಾಲೆಯಲ್ಲಿ ನೀರು ಬಂದ್‌ ಮಾಡಿ, ಅ.24 ರಿಂದ ನ. 20 ರವರೆಗೆ ಒಟ್ಟು 25 ದಿವಸ ನೀರು ಹರಿಸುವ ಸಾಧ್ಯತೆ ಇದೆ.  ಈ ಹಿಂದಿನ ಕಾಡಾ ಸಮಿತಿಯ ತೀರ್ಮಾನದಂತೆ ಆಫ್‌ ಅಂಡ್‌ ಆನ್‌ ಪದ್ಧತಿ ಪ್ರಕಾರವೇ ಈಗ ನೀರನ್ನು ಆಫ್‌ ಮಾಡಲಾಗಿದೆ. 

ಭತ್ತದ ಬೆಳೆ ಈಗ ಕಾಳು ಕಟ್ಟುವ ಹಂತದಲ್ಲಿರುವುದರಿಂದ ನೀರು ಬಂದ್‌ ಮಾಡದೇ ಸತತವಾಗಿ ನಾಲೆಯಲ್ಲಿ ನೀರು ಹರಿಸಬೇಕೆಂಬ ಒತ್ತಾಯ ಅಚ್ಚುಕಟ್ಟಿನ ಭತ್ತದ ಬೆಳೆಗಾರರಿಂದ ಕೇಳಿ ಬಂದಿತ್ತು. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಹರಿಹರ ಕ್ಷೇತ್ರದ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಕೂಡಾ ನಾಲೆಯಲ್ಲಿ ಸತತವಾಗಿ ನೀರು ಹರಿಸುವಂತೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಒತ್ತಡ ಹಾಕಿದ್ದರು. 

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್‌, ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್, ಸತೀಶ್ ಕೊಳೇನಹಳ್ಳಿ, ಬಾತಿ ವೀರೇಶ್ ನೇತೃತ್ವದ ಬಿಜೆಪಿ ನಿಯೋಗವು ಡಿಸಿಎಂ ಡಿ.ಕೆ. ಶಿವಕುಮಾರ್‌ ಮತ್ತು ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಬಲದಂಡೆ ನಾಲೆಯಲ್ಲಿ ಸತತವಾಗಿ ನೀರು ಹರಿಸುವಂತೆ ಮನವಿ ಮಾಡಿದ್ದರು.

ಭದ್ರಾ ಯೋಜನಾ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ, ರೈತ ಒಕ್ಕೂಟದ ಶಾಮನೂರು ಲಿಂಗರಾಜ್‌, ಎಪಿಎಂಸಿ ಮಾಜಿ ಅಧ್ಯಕ್ಷರಾದ ನಾಗೇಶ್ವರರಾವ್‌, ಜಿ. ಮಂಜುನಾಥ್‌ ಪಟೇಲ್‌ ನೇತೃತ್ವದ ರೈತರ ನಿಯೋಗವೂ ಸೊರಬದಲ್ಲಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ, ನಾಲೆಯಲ್ಲಿ ನೀರು ನಿಲ್ಲಿಸದಂತೆ ಮನವಿ ಮಾಡಿ ಬಂದಿದ್ದರು. 

ಈ ಎಲ್ಲಾ ಒತ್ತಡಗಳ ನಡುವೆಯೂ ಭದ್ರಾ ಕಾಡಾ ಅಧ್ಯಕ್ಷರೂ ಆದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಸೂಚನೆ ಮೇರೆಗೆ ಈ ಹಿಂದಿನ ವೇಳಾಪಟ್ಟಿ ಪ್ರಕಾರ ಮಂಗಳವಾರ ಸಂಜೆ 6 ಗಂಟೆಯಿಂದ ಬಲದಂಡೆ ನಾಲೆಯಲ್ಲಿ ನೀರು ಬಂದ್‌ ಮಾಡಲಾಗಿದೆ.

ಈ ತೀರ್ಮಾನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಚ್ಚುಕಟ್ಟಿನ ದಾವಣಗೆರೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರೈತರು ನಾಲೆಯಲ್ಲಿ ನೀರು ಮುಂದುವರೆಸುವಂತೆ ಆಗ್ರಹಿಸಿದ್ದಾರೆ. 

ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸುವ ಬಗ್ಗೆ ತೀರ್ಮಾನ ಹೇಳುತ್ತೇನೆಂದು ಹೇಳಿ, ಇದುವರೆಗೂ ಯಾವ ತೀರ್ಮಾನ ಹೇಳದಿರುವ ಬಗ್ಗೆಯೂ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

error: Content is protected !!