ನಗರಕ್ಕೆ ಇಂದು ರಾಜಯೋಗಿನಿ ಬ್ರಹ್ಮಾಕುಮಾರಿ ಆಶಾ ದೀದೀಜಿ

ನಗರಕ್ಕೆ ಇಂದು ರಾಜಯೋಗಿನಿ ಬ್ರಹ್ಮಾಕುಮಾರಿ ಆಶಾ ದೀದೀಜಿ

`ಒತ್ತಡ ಮುಕ್ತ ಆಡಳಿತ’ ವಿಷಯ ಕುರಿತು ವಿಶೇಷ ಉಪನ್ಯಾಸ

ವಿಶ್ವ ಭ್ರಾತೃತ್ವದಲ್ಲಿ ತನ್ನದೇ ಆದ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಸೇವಾ ಕೇಂದ್ರದಿಂದ `ಒತ್ತಡ ಮುಕ್ತ ಆಡಳಿತ’ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿದೆ.

ಸಂಜೆ 6 ಗಂಟೆಗೆ ಸ್ಥಳೀಯ ಡಿ. ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್‌ನಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದ ಶಿವಧ್ಯಾನ ಮಂದಿರದಲ್ಲಿ ಈ ಕಾರ್ಯಕ್ರಮ ಏರ್ಪಾಡಾಗಿದೆ ಎಂದು ಸಂಸ್ಥೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ತಿಳಿಸಿದ್ದಾರೆ.

ಬ್ರಹ್ಮಾಕುಮಾರಿ ಸಂಸ್ಥೆಯ ಪ್ರಧಾನ ಕೇಂದ್ರ ಅಬು ಪರ್ವತದ ಆಡಳಿತ ಮಂಡಳಿ ಸದಸ್ಯರೂ, ದೆಹಲಿಯ ಓಂ ಶಾಂತಿ ರಿಟ್ರೀಟ್ ಸೆಂಟರ್  ಸಂಚಾಲಕರೂ, ಹಿರಿಯ ರಾಜಯೋಗಿನಿಯರೂ ಆಗಿರುವ ಬ್ರಹ್ಮಾಕುಮಾರಿ ಆಶಾ ದೀದೀಜಿ, `ನಮ್ಮ ಕೆಲಸದಲ್ಲಿ ಒತ್ತಡ ಮುಕ್ತವಾಗಿ ಹೇಗೆ ಕಾರ್ಯ ನಿರ್ವಹಿಸಬೇಕು’ ಎನ್ನುವ ವಿಷಯ ಕುರಿತಂತೆ ಉಪನ್ಯಾಸ ನೀಡಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನೂ ನೆರವೇರಿಸಲಿರುವ ಆಶಾ ದೀದೀಜಿ,  ಇಂದು ಮಧ್ಯಾಹ್ನ ನಗರಕ್ಕೆ ಆಗಮಿಸಲಿದ್ದು, ಇಂದು ಮತ್ತು ನಾಳೆ ಎರಡು ದಿನ ಬ್ರಹ್ಮಾಕುಮಾರಿ ಸಂಸ್ಥೆಯಲ್ಲಿ ಆಯೋಜನೆಗೊಂಡಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಕ್ಷಿಪ್ತ ಪರಿಚಯ : ಮೂಲತಃ ಕರ್ನಾಟಕದವರಾದ ಆಶಾ ದೀದೀಜಿ, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಸಮಾಜಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಮುನುಕುಲದ ಸೇವೆ ಮತ್ತು ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ತಮ್ಮ ಜೀವನವನ್ನು ಮುಡುಪಾಗಿ ಡುವ ನಿಟ್ಟಿನಲ್ಲಿ 1972ರಲ್ಲಿ ಬ್ರಹ್ಮಾಕುಮಾರೀಸ್ ಸಂಸ್ಥೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡು, ಸುಮಾರು 50 ವರ್ಷಗಳಿಂದ ವಿಶ್ವ ನವ ನಿರ್ಮಾಣ ಅರ್ಥಾತ್ ಪರಮಾತ್ಮನ ಸೇವೆಯಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ.

ತಮ್ಮ 9ನೇ ವಯಸ್ಸಿನಿಂದಲೇ ಬ್ರಹ್ಮಾಕುಮಾರೀಸ್ ಸಂಸ್ಥೆಯ ಮೂಲಕ ಅಧ್ಯಾತ್ಮಿಕ ಜೀವನವನ್ನು ಅನುಸರಿಸು ತ್ತಿರುವ ಆಶಾ ದೀದೀಜಿ, ಇದೀಗ ; ಬ್ರಹ್ಮಾಕುಮಾರೀಸ್ ಸಂಸ್ಥೆಯ ಓರ್ವ ಹಿರಿಯ ಮುತ್ಸದ್ಧಿಗಳೂ, ಆಶಾವಾದಿಗಳೂ, ನಮ್ರಚಿತ್ತರೂ, ದೃಢತೆಯುಳ್ಳವರೂ, ಸಮರ್ಪಿತರೂ, ಮಂದಸ್ಮಿತರೂ, ಅಧ್ಯಾತ್ಮಿಕ ಚಿಂತಕರೂ, ಸುಪ್ರಸಿದ್ದ ವಾಗ್ಮಿಗಳೂ ಸಹ ಆಗಿದ್ದಾರೆ. ವರ್ತಮಾನದಲ್ಲಿ ದೆಹಲಿ ಹತ್ತಿರವಿರುವ ಓಂ ಶಾಂತಿ  ರಿಟ್ರೀಟ್ ಸೆೆಂಟರ್‌ನ ಸಂಚಾಲಕರು ಮತ್ತು ಬ್ರಹ್ಮಾಕುಮಾರೀಸ್ ಸಂಸ್ಥೆಯ ಆಡಳಿತ ಮಂಡಳಿಯ ಪ್ರಮುಖ ಸದಸ್ಯರೂ ಆಗಿದ್ದಾರೆ.

ಆಯುಷ್ ಮಂತ್ರಾಲಯದ ಯೋಗ ತಜ್ಞರ ಸಮಿತಿಯಲ್ಲಿ ಆಶಾ ದೀದೀಜಿಯವರು ಬ್ರಹ್ಮಾಕುಮಾರೀಸ್ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದಾರೆ. ತನ್ಮೂಲಕ ದೇಶಾದ್ಯಂತ ವಿಶ್ವ ಯೋಗ ದಿನಾಚರಣೆಯನ್ನು ವ್ಯವಸ್ಥಿತ ಮತ್ತು ಪರಿಣಾಮಕಾರಿಯಾಗಿ ಆಯೋಜಿಸಲು ಸಹ ಭಾಗಿಗಳಾಗಿದ್ದಾರೆ.

ಆಶಾ ದೀದೀಜಿಯವರು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಾಜೆಕ್ಟ್‌ಗಳನ್ನು ಪ್ರಸ್ತುತ ಪಡಿಸಿದ್ದಾರೆ. ಅವುಗಳಲ್ಲಿ ಪ್ರಮುಖವೆಂದರೆ  ವಿಶ್ವಸಂಸ್ಥೆಯಲ್ಲಿ ಶಾಂತಿ-ಸಂಸ್ಕೃತಿಯ ವರ್ಷ-2000 ಅನ್ನು ಪ್ರಸ್ತುತಪಡಿಸಿದ್ದಾರೆ. ಉತ್ತಮ ವಿಶ್ವದ ನಿರ್ಮಾಣಕ್ಕಾಗಿ ಸರ್ವರ ಸಹಯೋಗ – 1998ರಲ್ಲಿ ವಿಶ್ವಸಂಸ್ಥೆಯ ಪ್ರಾಜೆಕ್ಟನ್ನು ಪ್ರಸ್ತುತಪಡಿಸಿದ್ದಾರೆ. ಮಿಲಿಯನ್ ಮಿನಿಟ್ಸ್ ಆಫ್ ಪೀಸ್ – ವಿಶ್ವಸಂಸ್ಥೆಯ ಪ್ರಾಜೆಕ್ಟನ್ನು ಪ್ರಸ್ತುತಪಡಿಸಿದ್ದಾರೆ.

ಅಧ್ಯಾತ್ಮಿಕ ಚಿಂತಕರಾಗಿ ಆಶಾ ದೀದೀಜಿಯವರು ಅನೇಕ ಮಂತ್ರಿಗಳಿಗೆ, ರಾಜ್ಯಪಾಲರಿಗೆ, ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ, ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ, ಶಾಸಕರಿಗೆ ರಾಜಯೋಗ ಶಿಕ್ಷಣವನ್ನು ನೀಡುತ್ತಿದ್ದಾರೆ. ಐ.ಎ.ಎಸ್. ಅಧಿಕಾರಿಗಳು, ನಾಯಕರುಗಳು, ವ್ಯವಸ್ಥಾಪಕರು, ಕಾರ್ಯದರ್ಶಿಗಳಿಗೆ ಉತ್ತಮ ಆಡಳಿತವನ್ನು ನಡೆಸಲು ಅನೇಕ ತರಬೇತಿಗಳನ್ನು ರೂಪಿಸಿದ್ದಾರೆ.

ಉದಾಹರಣೆಗೆ ಒತ್ತಡ ನಿರ್ವಹಣೆ, ಮನಸ್ಸಿನ ನಿರ್ವಹಣೆ, ವಿಚಾರ-ನಿರ್ವಹಣೆ, ಅಹಂಕಾರ ಮತ್ತು ಕ್ರೋಧವನ್ನು ಜಯಿಸುವುದು, ಮೆಡಿಟೇಷನ್ ಇತರೆ.

ವಿಶ್ವದಾದ್ಯಂತ ಸಂಚರಿಸುತ್ತಾ ಶಾಂತಿ ಮತ್ತು ಅಧ್ಯಾತ್ಮಿಕತೆಯನ್ನು ಹರಡಿಸಲು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ, ತಮ್ಮ ಪ್ರೇರಣಾದಾಯಕ ಮಾತುಗಳನ್ನು ನುಡಿದಿದ್ದಾರೆ. ಅನೇಕ ಸಂವಾದಗಳು, ರೇಡಿಯೋ ಮತ್ತು ಟಿ.ವಿ. ಕಾರ್ಯಕ್ರಮ, ಉಪನ್ಯಾಸವನ್ನೂ ನೀಡಿದ್ದಾರೆ. `ಪೀಸ್ ಆಫ್ ಮೈಂಡ್’ ಟಿ.ವಿ, `ಸಂಸ್ಕಾರ’ ಟಿ.ವಿ ಮತ್ತು `ಅವೇಕನಿಂಗ್’ ಟಿ.ವಿ.ಗಳಲ್ಲಿ ನಿರಂತರವಾಗಿ ತಮ್ಮ ಜ್ಞಾನಸುಧೆಯನ್ನು ಹರಿಸುತ್ತಿದ್ದಾರೆ.

ಬ್ರಹ್ಮಾಕುಮಾರೀಸ್ ಸಂಸ್ಥೆಯಲ್ಲಿರುವ ಅನೇಕ ಸೇವಾ ವಿಭಾಗಗಳ ಪೈಕಿ ಆಡಳಿತ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ದೀದೀಜಿ, ಅನೇಕ ಕುಮಾರಿಯರಿಗೆ ಉತ್ತಮ ಬ್ರಹ್ಮಾಕುಮಾರಿ ಶಿಕ್ಷಕಿಯಾಗಲು ಅತ್ಯುತ್ತಮವಾದ ತರಬೇತಿಯನ್ನು ನೀಡುತ್ತಿದ್ದಾರೆ.

ಉಪನ್ಯಾಸ : ಇಂದು ಸಂಜೆ 6 ಗಂಟೆಗೆ ಶಿವಧ್ಯಾನ ಮಂದಿರದಲ್ಲಿ ನಡೆಯಲಿರುವ `ಒತ್ತಡ ಮುಕ್ತ ಆಡಳಿತ’ ಕಾರ್ಯಕ್ರಮವನ್ನು ಆಶಾ ದೀದೀಜಿ ನಡೆಸಿಕೊಡಲಿದ್ದಾರೆ.

ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ ಸಾನ್ನಿಧ್ಯ ಮತ್ತು ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ನಿರ್ಮಲಾಜೀ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ.

ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ, ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಕೆ. ತ್ಯಾಗರಾಜನ್, ದಾವಣಗೆರೆ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಬಿ.ಡಿ. ಕುಂಬಾರ್, ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಅಥಣಿ ಎಸ್. ವೀರಣ್ಣ, ಜಿ.ಎಂ. ವಿಶ್ವವಿದ್ಯಾನಿಲಯದ ಡೀನ್ ಪ್ರೊ. ಜಿ.ಎಂ. ಪಾಟೀಲ್ ಅವರುಗಳು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸುವರು.

error: Content is protected !!